ಮಂಗಳೂರು: ಕೋವಿಡ್-19 ಸ್ಥಿತಿ ಪರಾಮರ್ಶಿಸಿ, ಸರ್ಕಾರದ ಪೂರ್ವಾನುಮತಿ ಪಡೆದು, ಈ ಬಾರಿ ಡಿಸೆಂಬರ್ 23ರಿಂದ ಜನವರಿ 16ರವರೆಗೆ ಉಳ್ಳಾಲ ಉರುಸ್ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಳ್ಳಾಲ ಉರುಸ್ ಆಚರಣೆ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಉರುಸ್ ಆಚರಣೆಗೆ ಇನ್ನೂ ಎರಡು ತಿಂಗಳ ಕಾಲಾವಕಾಶ ಇದೆ. ಒಂದು ತಿಂಗಳ ನಂತರ ಮತ್ತೊಂದು ಸಭೆ ನಡೆಸಲಾಗುವುದು. ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಿದ್ದು, ಅಲ್ಲಿಂದ ಹೆಚ್ಚಿನ ಭಕ್ತರು ಬರುವುದರಿಂದ, ಕೋವಿಡ್ ಕಡಿಮೆಯಾದಲ್ಲಿ ಸರ್ಕಾರದ ಅನುಮತಿ ಪಡೆದು, ಉರುಸ್ ಆಚರಿಸಲಾಗುವುದು. ಒಂದೊಮ್ಮೆ ಪರಿಸ್ಥಿತಿಯಲ್ಲಿ ವ್ಯತ್ಯಯವಾದಲ್ಲಿ, ಉರುಸ್ ಅನ್ನು ಮುಂದೂಡಲಾಗುವುದು ಎಂದರು.
ಪ್ರತಿ ಐದು ವರ್ಷಗಳಿಗೊಮ್ಮೆ ಉಳ್ಳಾಲದ ಉರುಸ್ ಆಚರಿಸಲಾಗುತ್ತದೆ. ಸಾವಿರಾರು ಜನರು ಭಾಗವಹಿಸುತ್ತಾರೆ. ಆರೋಗ್ಯ ಇಲಾಖೆ ವತಿಯಿಂದ ಈ ಭಾಗದಲ್ಲಿ ಕೋವಿಡ್ ಲಸಿಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಮೆಡಿಕಲ್ ಚೆಕ್‌ಪೋಸ್ಟ್ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು. ಉರುಸ್ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಂಡು ಶಾಶ್ವತವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಕಡಲತೀರ, ಸಂಪರ್ಕ ರಸ್ತೆ ಅಭಿವೃದ್ಧಿ ಆಗಬೇಕು. ಈ ಸಂಬಂಧ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಬೇಕು. ಭದ್ರತೆಗೆ ವಿಶೇಷ ಒತ್ತು ನೀಡಬೇಕು ಎಂದು ತಿಳಿಸಿದರು.
ಶಾಸಕ ಯು.ಟಿ. ಖಾದರ್, ಉಳ್ಳಾಲ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್, ಉಪಾಧ್ಯಕ್ಷ ಮಹೀನ್ ಇಸ್ಮಾಯಿಲ್, ಉಸ್ತಾದ್ ಅಬ್ದುಲ್, ಜಂಟಿ ಕಾರ್ಯದರ್ಶಿಗಳಾದ ಆಸನ್ ಅಬ್ದುಲ್, ಯು.ಟಿ. ಇಲಿಯಾಸ್ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post