ಮಂಗಳೂರು : ಜಿಲ್ಲೆಯಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸ್, ಎಟಿಎಸ್ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚಕರ ಜಾಲವೊಂದು ಬಂಧನದ ಭೀತಿ ಹುಟ್ಟಿಸಿ ವಾಟ್ಸಾಪ್ ವಿಡಿಯೋ ಕರೆ ಮೂಲಕ ನಿರಂತರ ಬೆದರಿಕೆ ಹಾಕಿ ಹಂತ ಹಂತವಾಗಿ RTGS ಮೂಲಕ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿಕೊಂಡಿದೆ.
ಅಪರಿಚಿತ ದುಷ್ಕರ್ಮಿಗಳು ದೂರುದಾರರನ್ನು ಸಂಪರ್ಕಿಸಿ, ತಾವು ಮುಂಬೈ ಪೊಲೀಸ್ ಮತ್ತು ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. “ನಿಮ್ಮ ಬ್ಯಾಂಕ್ ಖಾತೆಯಿಂದ ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆಯಾಗಿದೆ” ಎಂದು ಸುಳ್ಳು ಹೇಳಿ, ತಕ್ಷಣ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ವಾಟ್ಸಾಪ್ ವಿಡಿಯೋ ಮೂಲಕ ನಿರಂತರ ಬೆದರಿಕೆ ಕರೆ: ವಂಚಕರು ವಾಟ್ಸಾಪ್ ವಿಡಿಯೋ ಕರೆಗಳ ಮೂಲಕ ದೂರುದಾರರನ್ನು ನಿರಂತರವಾಗಿ ಸಂಪರ್ಕಿಸಿ, ತನಿಖೆಯ ಹೆಸರಿನಲ್ಲಿ ಮಾನಸಿಕ ಒತ್ತಡ ಹಾಕಿದ್ದಾರೆ. ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಬೇಕಿದ್ದು, ಖಾತೆಯಲ್ಲಿರುವ ಹಣದ ದೃಢೀಕರಣ ಅಗತ್ಯವಾಗಿದೆ ಎಂದು ನಂಬಿಸಿದ್ದಾರೆ. ಪೊಲೀಸ್ ತನಿಖೆ ಹಾಗೂ ಬಂಧನದ ಭೀತಿಗೆ ಒಳಗಾದ ದೂರುದಾರರಿಗೆ, ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ಸೂಚಿಸಲಾದ ವಿವಿಧ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ವರ್ಗಾಯಿಸುವಂತೆ ಆರೋಪಿಗಳು ನಿರ್ದೇಶಿಸಿದ್ದಾರೆ. ವಂಚಕರ ಈ ಮಾತುಗಳನ್ನು ನಿಜವೆಂದು ನಂಬಿದ ದೂರುದಾರರು, 2026ರ ಸೆಪ್ಟೆಂಬರ್ 2ರಿಂದ ಅಕ್ಟೋಬರ್ 6ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ರೂ.31,50,000 ಹಣವನ್ನು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ವರ್ಗಾಯಿಸಿದ್ದಾರೆ.
ಬಂಧನದ ಭೀತಿ ಹಾಗೂ ತನಿಖೆಯ ಹೆಸರಿನಲ್ಲಿ ನಡೆದ ಈ ವಂಚನೆಯಲ್ಲಿ ತಾವು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದೇವೆ. ತಾವು ಡಿಜಿಟಲ್ ಅರೆಸ್ಟ್ ಹೆಸರಿನ ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದ್ದು, ತಕ್ಷಣ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ ತಿಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಮ್ಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ (CCPS DK) ಅಪರಾಧ ಸಂಖ್ಯೆ 42/2026ರಡಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 204, 308(6), 318(4), 319(2), 351 ಜೊತೆಗೆ 3(5)ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post