ಮಂಗಳೂರು, ಡಿ.12 : ಕಾಂತಾರ ಖ್ಯಾತಿಯ ನಿರ್ದೇಶಕ ರಿಷಬ್ ಶೆಟ್ಟಿ ವಾರಾಹಿ ಪಂಜುರ್ಲಿಗೆ ಹರಕೆ ನೇಮ ಕೊಟ್ಟಿರುವುದು ಮತ್ತು ಅದರಲ್ಲಿ ದೈವ ನರ್ತಕ ಅತಿರೇಕವಾಗಿ ವರ್ತಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಕೇಳಿಬಂದು ವಿವಾದ ರೂಪ ಪಡೆದಿರುವ ವಿಚಾರದಲ್ಲಿ ಸ್ವತಃ ಕದ್ರಿ ಬಾರೆಬೈಲಿನ ಜಾರಂದಾಯ, ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನ ಆಡಳಿತ ಕಮಿಟಿಯವರು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಟಿ ಕರೆದು ಮಾತನಾಡಿದ ದೈವಸ್ಥಾನದ ಆಡಳಿತ ಕಮಿಟಿಯ ಗೌರವಾಧ್ಯಕ್ಷ ರವಿ ಪ್ರಸನ್ನ, ಹರಕೆ ನೇಮ ಆಗಿರುವ ಬಗ್ಗೆ ನಮಗೆ ಯಾವುದೇ ರೀತಿಯ ಸಂಶಯಗಳಿಲ್ಲ. ದೈವ ನರ್ತನ ಬಗ್ಗೆಯೂ ಆಕ್ಷೇಪ ಇಲ್ಲ. ಆದರೆ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ನಾನಾ ರೀತಿಯ ಟೀಕೆ ಬಂದಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇವೆ. ಇಲ್ಲಿ ದೈವ ನರ್ತಕರು ತೊಡೆಯಲ್ಲಿ ಮಲಗಿದ್ದು ಎನ್ನಲು ಯಾವ ಆಧಾರವೂ ಇಲ್ಲ. ದೈವ ನರ್ತನವೇ ಹಾಗೆ. ನಾವು ಹಿಂದೆಯೂ ಇದೇ ರೀತಿಯ ವರ್ತನೆಯನ್ನು ನೋಡಿದ್ದೇವೆ. ಯಾರೇ ಹರಕೆ ಕೊಟ್ಟರೂ ಇದೇ ರೀತಿ ಪ್ರೀತಿ ತೋರಿಸುತ್ತದೆ. ಹರಕೆ ಕೊಟ್ಟವರನ್ನು ಕೈಹಿಡಿದು ಆಧರಿಸುವುದು ವಾಡಿಕೆ ಎಂದು ಹೇಳಿದರು.
ಹಲವಾರು ಹರಕೆ ನೇಮಗಳು ಬಂದಿವೆ, ದೈವ ಚಿತ್ತದಂತೆ ಇದನ್ನು ಹೊಂಬಾಳೆ ಫಿಲಂಸ್ ತಂಡದವರ ನೇಮವನ್ನು ಪಡೆದಿದೆ. ಮುಂದಿನ ಫೆಬ್ರವರಿಯಲ್ಲೂ ಮತ್ತೊಂದು ತಂಡದ ಹರಕೆ ನೇಮ ಇದೆ. ಇಲ್ಲಿನ ಪೂಜಾರಿ ವರ್ಗ, ದೈವ ನರ್ತಕರ ಬಗ್ಗೆ ನಮಗೆ ಯಾವುದೇ ಕಿಂಚಿತ್ತೂ ಆಕ್ಷೇಪ ಇಲ್ಲ. ಇಷ್ಟೆಲ್ಲ ಟೀಕೆ ಬಂದರೂ ನಾವು ಮಾತನಾಡಿಲ್ಲ ಎಂಬ ಅಪವಾದ ಬೇಡ ಎನ್ನುವ ಕಾರಣಕ್ಕೆ ಸ್ಪಷ್ಟನೆ ಕೊಡುತ್ತಿದ್ದೇವೆ. ಈ ರೀತಿಯ ಟೀಕೆ ಬಂದಿರುವುದು ನಮಗೆ ನೋವಾಗಿದೆ, ಭಕ್ತರ ಭಾವನೆಗೆ ಧಕ್ಕೆ ಬಂದಿದೆ ಎಂದು ಹೇಳಿದರು. ನಾವು ಸಿನಿಮಾದಲ್ಲಿ ದೈವಾರಾಧನೆ ತೋರಿಸುವ ಬಗ್ಗೆ ಮಾತನಾಡುವುದಿಲ್ಲ. ತಮ್ಮಣ್ಣ ಶೆಟ್ಟಿ ಮಾತನ್ನು ಆಧರಿಸಿ ಸುದ್ದಿ ಮಾಡಿದ್ದೀರಿ, ಅದರ ನೆಪದಲ್ಲಿ ಕ್ಷೇತ್ರಕ್ಕೆ ಅಪಚಾರ ಮಾಡುವ ಕೆಲಸ ಆಗಿದೆ ಎಂದು ಹೇಳಿದರು.


ಜಾಲತಾಣ ಮತ್ತು ಮಾಧ್ಯಮದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಕದ್ರಿ ಪೊಲೀಸ್ ಠಾಣೆ ಮತ್ತು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದೇವೆ. ದೈವವೇ ನೋಡಿಕೊಳ್ಳಲಿ ಎಂದು ಇಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಮಾನನಷ್ಟ ಮೊಕದ್ದಮೆ ಹೂಡುವುದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದ ರವಿ ಪ್ರಸನ್ನ, ದೈವಾರಾಧನೆಯ ವಕ್ತಾರನೆಂದು ಹೇಳಿಕೊಳ್ಳುವ ತಮ್ಮಣ್ಣ ಶೆಟ್ಟಿ ತಮ್ಮ ದೈವದ ಬಗ್ಗೆ ನೋಡಿಕೊಳ್ಳಲಿ. ದೈವದ ಕಟ್ಟುಕಟ್ಟಳೆಗಳು ಆಯಾ ಭಾಗದಲ್ಲಿ ಬೇರೆ ಬೇರೆ ಇರುತ್ತವೆ. ಹರಕೆ ನೇಮವನ್ನು ಚೇಳಾಯರಿನಲ್ಲೂ ಕೊಡುವ ಪದ್ಧತಿ ಇದೆ. ಹರಕೆ ನೇಮವೇ ಇಲ್ಲ ಎನ್ನುವುದಕ್ಕೆ ಇವರು ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ. ಇಷ್ಟಕ್ಕೂ ಇಲ್ಲಿ ಗ್ರಾಮ ದೈವ ಜಾರಂದಾಯನಿಗೆ ಅರ್ಪಿಸಿದ ನೇಮ ಅಲ್ಲ. ವಾರಾಹಿ ಪಂಜುರ್ಲಿಗೆ ಎಣ್ಣೆಬೂಳ್ಯ ಕೊಟ್ಟು ಹರಕೆ ನೇಮ ಕೊಟ್ಟಿರುವುದು. ವಾರಾಹಿ ಪಂಜುರ್ಲಿ ಭಟ್ರ ಮನೆಯವರ ದೈವವಾಗಿದ್ದು, ಅದಕ್ಕೆ ನೇಮ ತೆಗೆದುಕೊಳ್ಳುವುದು ಅವರಿಗೆ ಬಿಟ್ಟದ್ದು ಎಂದರು.

ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಅಕ್ಷಿತ್ ಸುವರ್ಣ, ಕದ್ರಿ ದೇವಸ್ಥಾನದ ಕೃಷ್ಣ ಭಟ್, ಚರಣ್ ಕುಮಾರ್ ಇದ್ದರು.
Discover more from Coastal Times Kannada
Subscribe to get the latest posts sent to your email.







Discussion about this post