ಪಣಂಬೂರು: ಲೈಟರ್ ವಿಚಾರಕ್ಕೆ ಇತ್ತಂಡಗಳ ನಡುವೆ ವಾಗ್ವಾದ ನಡೆದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಕಟ್ಟೆ, ತಣ್ಣಿರುಬಾವಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿ ಪಣಂಬೂರು ಠಾಣೆಯಲ್ಲಿ 2 ಪ್ರತ್ಯೆಕ ಪ್ರಕರಣಗಳು ದಾಖಲಾಗಿದೆ.
ಜನವರಿ 12 ರಂದು ಮಧ್ಯರಾತ್ರಿ 12.45ಕ್ಕೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶಕಟ್ಟೆ, ತಣ್ಣೀರುಬಾವಿ ಎಂಬಲ್ಲಿ ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಮದ್ಯಪಾನ ಮಾಡಿಕೊಂಡು ಸಿಗರೇಟ್ ಸೇದುತ್ತಿದ್ದರು. ಈ ಸಂದರ್ಭ ಪ್ರೀತಂ ಮತ್ತು ಸನ್ವೀತ್ ಹಾಗೂ ಇತರರು ಸ್ಥಳಕ್ಕೆ ಬಂದು ಸಿಗಾರ್ ಲೈಟರ್ ಕೇಳಿದ್ದಾರೆ. ಪ್ರಜ್ವಲ್ ಸಿಗಾರ್ ಲೈಟರ್ ಅನ್ನು ಪ್ರೀತಂ ಹಾಗೂ ಇತರರಿಗೆ ನೀಡಿದ್ದು, ಅವರು ಸಿಗಾರ್ ಲೈಟರ್ ವಾಪಸ್ ಕೊಡದೇ ಇದ್ದಾಗ ಲೈಟರ್ ಕೊಡಿ ಎಂದು ಕೇಳಿದ್ದಾರೆ.
ಆಗ ನೀವು ಯಾಕೆ ಧಮ್ಕಿ ಹಾಕುತ್ತೀರಿ ಎಂದು ಹೇಳಿ ಅವರಲೊಬ್ಬ ಕಾರ್ತಿಕ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ. ನಂತರ ಅವರಲ್ಲಿದ್ದವರ ಪೈಕಿ 4 – 5 ಜನರು ಮರದ ಕೋಲುಗಳಿಂದ ಪ್ರಜ್ವಲ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆ. ನಂತರ ಅವರೊಳಗೆ ಪರಸ್ಪರ ಗಲಾಟೆ ನಡೆದಿದೆ. ಪರಸ್ಪರ ಹಲ್ಲೆ ಕುರಿತು ಪಣಂಬೂರು ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಂ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 03/2025 ಕಲಂ: 118(1), 126(2), 189(2), 189(4), 190, 191(2), 191(3),352) ಬಿ.ಎನ್.ಎಸ್ ನಂತೆ ದಾಖಲಾಗಿದ್ದು ಈ ಪ್ರಕರಣದಲ್ಲಿ ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಪ್, ಧನುಷ್, ಪ್ರಜ್ವಲ್ ಎಂಬವರು ಆರೋಪಿಗಳಾಗಿದ್ದು ಅವರಲ್ಲಿ, ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಎಂಬವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಅದರಂತೆ ಪ್ರಜ್ವಲ್ ಎಂಬಾತ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 04/2025 ಕಲಂ: 189(2), 189(4) , 191(2), 191(3), 118(1), 190 ಬಿ. ಎನ್.ಎಸ್ ನಂತೆ ದಾಖಲಾಗಿದ್ದು ಈ ಪ್ರಕರಣದಲ್ಲಿ ಪ್ರೀತಂ ಮತ್ತು ಸನ್ವೀತ್ ಹಾಗೂ ಇತರರು ಆರೋಪಿಗಳಾಗಿರುತ್ತಾರೆ.
ಘಟನೆಗೆ ಸಂಬಂಧಿಸಿದಂತೆ ಡಿ.ಸಿ.ಪಿ ಸಿದ್ದಾರ್ಥ್ ಘೋಯಲ್ ಮಂಗಳೂರು ನಗರ ಹಾಗೂ ಎಸಿಪಿ, ಸಿಸಿಬಿ, ಎಸಿಪಿ ಉತ್ತರ ಉಪ ವಿಭಾಗ, ಪೊಲೀಸ್ ನಿರೀಕ್ಷಕರು ಪಣಂಬೂರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post