ಬೆಂಗಳೂರು: ದಲಿತ ಸಮುದಾಯವನ್ನು ಅಪಮಾನಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಚಿತ್ರ ನಟ ಉಪೇಂದ್ರ ಅವರಿಗೆ ರಾಜ್ಯ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕು ಎಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಚಂದನ್ ಗೌಡರ್ ಅವರ ನೇತೃತ್ವದ ನ್ಯಾಯಪೀಠದಿಂದ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಆಗಸ್ಟ್ 12ರಂದು ಪ್ರಜಾಕೀಯ ಪಕ್ಷಕ್ಕೆ 6 ವರ್ಷವಾದ ಪ್ರಯುಕ್ತ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜತೆ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʼಊರು ಅಂದ್ಮೇಲೆ ಹೊಲೆಗೇರಿ ಇರುತ್ತಲ್ಲಾ ಹಾಗೆ..ʼ ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಜತೆಗೆ ದಲಿತ ಸಂಘಟನೆಗಳು ಸಿಡಿದೆದ್ದವು. ಇದರಿಂದ ಎಚ್ಚೆತ್ತುಕೊಂಡ ಉಪೇಂದ್ರ ಅವರು ತಮ್ಮ ಲೈವ್‌ನ್ನು ಡಿಲೀಟ್ ಮಾಡಿದ್ದಲ್ಲದೆ, ಕ್ಷಮೆ ಯಾಚನೆ ಕೂಡಾ ಮಾಡಿದ್ದರು. ಆದರೆ ಸಾಮಾಜಿಕ ಆಕ್ರೋಶ ಕಡಿಮೆ ಆಗಿಲ್ಲ. ಅವರ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1985ರ (Atrocity act) ಅಡಿಯಲ್ಲಿ ಈಗಾಗಲೇ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಪೊಲೀಸರ ಅದರ ಬೆನ್ನಿಗೇ ಉಪೇಂದ್ರ ಅವರಿಗಾಗಿ ಹುಡುಕಾಟ ಶುರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಪೇಂದ್ರ ಅವರು ಎಫ್‌ಆರ್‌ಐಗಳಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಉಪೇಂದ್ರ ಅವರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಕೋರ್ಟ್ ಮುಂದೆ ಉಪೇಂದ್ರ ಪರವಾಗಿ ಉದಯ್ ಹೊಳ್ಳ ಅವರು ವಾದ ಮಂಡಿಸಿದರು. ʻʻಈ ಕೇಸ್‌ನಲ್ಲಿ ಎಸ್ಸಿ ಎಸ್ಟಿ ಕಾಯ್ದೆ ಅನ್ವಯಿಸುವುದಿಲ್ಲ. ಯಾಕೆಂದರೆ ಅವರು ಕೇವಲ ಗಾದೆ ಮಾತನ್ನು ಉಲ್ಲೇಖ ಮಾಡಿದ್ದಾರೆ. ಅದರಲ್ಲಿ ಯಾವುದೇ ಉದ್ದೇಶ ಇರಲಿಲ್ಲ. ಇಷ್ಟಾದರೂ ಅವರು ಈ ಬಗ್ಗೆ ಕ್ಷಮೆ ಯಾಚನೆ ಕೂಡಾ ಮಾಡಿದ್ದಾರೆ. ಇದೀಗ ಎಫ್ಐಆರ್ ದಾಖಲಿಸಿ ತನಿಖೆ ಮಾಡುತ್ತಿರುವುದು ಸರಿಯಲ್ಲ” ಎಂದು ಉದಯ್ ಹೊಳ್ಳ ಹೇಳಿದರು.
ʻʻಉಪೇಂದ್ರ ಅವರ ಮಾತಿನ ಹಿಂದೆ ಏನಾದರೂ ಉದ್ದೇಶವಿದ್ದರೆ ಅವರ ಹೇಳಿಕೆ ಹಿಂದೆ ಮುಂದಿನ ಸಂದರ್ಭ ಗಮನಿಸಿದರೆ ತಿಳಿಯುತ್ತದೆ. ಬೇರೆ ಯಾವುದೋ ವಿಚಾರಕ್ಕೆ ಸ್ಪಷ್ಡನೆ ನೀಡುವಾಗ ಗಾದೆ ಬಳಕೆ ಮಾಡಲಾಗಿದೆʼʼ ಎಂದು ಹೇಳಿದ ಅವರು, ಈ ರೀತಿ ದೂರು ನೀಡುವ, ಎಫ್‌ಐಆರ್ ದಾಖಲಿಸಿಕೊಳ್ಳುವುದರ ಹಿಂದೆ ದುರುದ್ದೇಶ ಕಾಣಿಸುತ್ತಿದೆ. ದೂರು ಸ್ವೀಕರಿಸಿದ ತಕ್ಷಣವೇ ಪೊಲೀಸರು ಮಹಜರು ಹೆಸರಲ್ಲಿ ಮನೆಗೆ ಭೇಟಿ ನೀಡಿದ್ದಾರೆ. ಅವರ ನಡೆಯಲ್ಲಿ ಕಿರುಕುಳ ನೀಡುವ ಉದ್ದೇಶ ಕಾಣುತ್ತಿದೆ. ಹೀಗಾಗಿ ಪ್ರಕರಣದ ತನಿಖೆಗೆ ತಡೆ ನೀಡಿʼʼ ಎಂದು ಮನವಿ ಮಾಡಿದರು.
ಉಪೇಂದ್ರ ಅವರ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಜತೆಗೆ ರಾಜ್ಯದ ಬೇರೆ ಬೇರೆ ಕಡೆ ದೂರು ನೀಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಹೈಕೋರ್ಟ್ ಸದ್ಯಕ್ಕೆ ಒಂದು ಎಫ್‌ಐಆರ್ ಮೇಲೆ ತಡೆಯಾಜ್ಞೆ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಒಂದು ಪ್ರಕರಣದಲ್ಲಿ ನೀಡಿದ ತಡೆಯಾಜ್ಞೆ ಉಳಿದವುಗಳಿಗೂ ಅನ್ವಯಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post