ಬೆಂಗಳೂರು, ಆ 14: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜತೆ ಪವಿತ್ರಾ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ಆದೇಶ ಇಂದು ಹೊರಬಿದ್ದಿದೆ. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ, ಜಸ್ಟೀಸ್ ಮಹದೇವನ್ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಈ ಕೊಲೆ ಪ್ರಕರಣದಲ್ಲಿ ಎ1 ಪವಿತ್ರಾಗೌಡ, ಎ2 ದರ್ಶನ್, ಎ6 ಜಗದೀಶ್ ಅಲಿಯಾಸ್ ಜಗ್ಗ, ಎ7 ಅನುಕುಮಾರ್ ಅಲಿಯಾಸ್ ಅನು, ಎ14 ಪ್ರದೋಶ್ , ಎ11 ನಾಗರಾಜು ಅಲಿಯಾಸ್ ನಾಗ, ಎ12 ಲಕ್ಷ್ಮಣ್ ಜಾಮೀನು ರದ್ದು ಪಡಿಸಲಾಗಿದೆ.
ದರ್ಶನ್ ತೂಗುದೀಪ ಅವರಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ”ಜನಪ್ರಿಯತೆ, ಅಧಿಕಾರ ಅಥವಾ ಸವಲತ್ತು ಏನೇ ಇರಲಿ, ಕಾನೂನಿನೆದುರು ಎಲ್ಲರೂ ಸಮಾನರು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೈಕೋರ್ಟ್‌ನ ಆದೇಶವು ಗಂಭೀರ ಕಾನೂನು ದೌರ್ಬಲ್ಯಗಳಿಂದ ಕೂಡಿದೆ. ಜಾಮೀನು ನೀಡಲು ಯಾವುದೇ ವಿಶೇಷ ಕಾರಣವನ್ನು ದಾಖಲಿಸುವಲ್ಲಿ ಆದೇಶವು ವಿಫಲವಾಗಿದೆ ಎಂದು ಪೀಠ ಹೇಳಿದೆ. ಹೈಕೋರ್ಟ್ ಆದೇಶವು ಕಾನೂನುಬದ್ಧವಾಗಿ ಸಂಬಂಧಿಸಿದ ಸಂಗತಿಗಳನ್ನು ಬಿಟ್ಟುಬಿಟ್ಟಿದೆ ಎಂದು ಸುಪ್ರೀಂ ತಿಳಿಸಿದೆ. “ಅಪರಾಧದ ಸ್ವರೂಪ, ಆರೋಪಿಯ ಪಾತ್ರ ಮತ್ತು ವಿಚಾರಣೆಯಲ್ಲಿ ಹಸ್ತಕ್ಷೇಪದ ಸ್ಪಷ್ಟ ಪರಿಣಾಮ/ಅಪಾಯವನ್ನು ಪರಿಗಣಿಸದೇ ಇಂತಹ ಗಂಭೀರ ಪ್ರಕರಣದಲ್ಲಿ ಜಾಮೀನು ನೀಡುವುದು ಸಂಪೂರ್ಣವಾಗಿ ಅನಗತ್ಯ ವಿವೇಚನೆಯ ಕ್ರಮ” ಎಂದು ನ್ಯಾಯಪೀಠದ ಪರವಾಗಿ ತೀರ್ಪು ನೀಡುತ್ತಾ ನ್ಯಾಯಮೂರ್ತಿ ಮಹಾದೇವನ್ ಅವರು ತಿಳಿಸಿದರು.
ಹೈಕೋರ್ಟ್ ಆದೇಶದಿಂದ ನೀಡಲಾದ ಸ್ವಾತಂತ್ರ್ಯವು ನ್ಯಾಯಯುತ ಆಡಳಿತಕ್ಕೆ ಬೆದರಿಕೆಯನ್ನು ಒಡ್ಡುತ್ತದೆ. ವಿಚಾರಣಾ ಪ್ರಕ್ರಿಯೆಯ ಹಳಿ ತಪ್ಪಿಸುತ್ತದೆ ಎಂದು ಪೀಠ ಹೇಳಿದೆ. “ಜನಪ್ರಿಯತೆ, ಅಧಿಕಾರ ಅಥವಾ ಸವಲತ್ತುಗಳನ್ನು ಲೆಕ್ಕಿಸದೇ, ಎಲ್ಲರೂ ಕಾನೂನಿಗೆ ಸಮಾನವಾಗಿ ಒಳಪಟ್ಟಿರುತ್ತಾರೆ” ಎಂದು ಪೀಠ ಹೇಳಿದೆ. “ಆರೋಪಿ ಯಾರೇ ಆಗಿರಲಿ, ಆರೋಪಿ ಎಷ್ಟೇ ದೊಡ್ಡವನಿರಲಿ ಅಥವಾ ಚಿಕ್ಕವನಿರಲಿ, ಅವನು ಅಥವಾ ಅವಳು ಯಾರೇ ಇರಲಿ, ಕಾನೂನಿಗೆ ಒಂದೇ ಎಂಬ ಬಲವಾದ ಸಂದೇಶವನ್ನು ಈ ತೀರ್ಪು ನೀಡುತ್ತದೆ” ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದರು.
Discover more from Coastal Times Kannada
Subscribe to get the latest posts sent to your email.