ಮಂಗಳೂರು, ಸೆ.14: ಮಹಿಳೆಯೊಬ್ಬರನ್ನು ತನ್ನ ಮನೆಯಲ್ಲೇ ಹೊಡೆದು ಕೊಂದಿದ್ದಲ್ಲದೆ, ತುಂಡು ತುಂಡು ಮಾಡಿ ಕತ್ತರಿಸಿ ಮಂಗಳೂರು ನಗರದ ಬೀದಿ ಬೀದಿಯಲ್ಲಿ ಎಸೆದು ಭಾರೀ ಸಂಚಲನ ಮೂಡಿಸಿದ್ದ ಪೈಶಾಚಿಕ ಕೃತ್ಯದಲ್ಲಿ ಮೂವರು ಆರೋಪಿಗಳನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದ್ದು, ಇದೇ ಸೆ.17ರಂದು ಶಿಕ್ಷೆ ಪ್ರಮಾಣ ಘೋಷಣೆಯಾಗಲಿದೆ.
ಅತ್ತಾವರ ನಿವಾಸಿ, ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿ ಎಂಬವರನ್ನು ಭೀಭತ್ಸ ರೀತಿಯಲ್ಲಿ ಕೊಲೆಗೈದಿದ್ದು ಮಂಗಳೂರು ನಗರದಲ್ಲಿ ಸಂಚಲನ ಸೃಷ್ಟಿಸಿತ್ತು. ನಗರದ ಕದ್ರಿ ಪಾರ್ಕ್, ನಂದಿಗುಡ್ಡೆ ಸ್ಮಶಾನದ ಬಳಿ ದೇಹದ ತುಂಡುಗಳು ಪತ್ತೆಯಾಗಿದ್ದವು. ಪ್ರಕರಣದ ಬೆನ್ನತ್ತಿದ ಕದ್ರಿ ಪೊಲೀಸರು ವೆಲೆನ್ಸಿಯಾ ಸೂಟರ್ ಪೇಟೆ ನಿವಾಸಿ ಜೋನಸ್ ಸ್ಯಾಮ್ಸನ್(45), ಆತನ ಪತ್ನಿ ಪತ್ನಿ ವಿಕ್ಟೋರಿಯಾ ಮಥಾಯಿಸ್ (47) ಮತ್ತು ಇವರಿಗೆ ಸಹಕರಿಸಿದ್ದ ಮರಕಡ ತಾರಿಪಾಡಿ ಗುಡ್ಡೆಯ ನಿವಾಸಿ ರಾಜು (34) ಎಂಬವರನ್ನು ಬಂಧಿಸಿದ್ದರು. ಶ್ರೀಮತಿ ಶೆಟ್ಟಿ ಅತ್ತಾವರದಲ್ಲಿ ಪೊಳಲಿ ಇಲೆಕ್ಟ್ರಾನಿಕ್ಸ್ ಎಂಬ ಅಂಗಡಿ ನಡೆಸುತ್ತಿದ್ದುದಲ್ಲದೆ, ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದರು. ಜೋನಸ್ ಸ್ಯಾಮ್ಸನ್ ಕೂಡ ಚಿಟ್ ಫಂಡ್ ಸದಸ್ಯನಾಗಿದ್ದುದಲ್ಲದೆ, ಎರಡು ತಿಂಗಳ ಚಿಟ್ ಕಂತು ಕಟ್ಟಿರಲಿಲ್ಲ.
ಚಿಟ್ ಫಂಡ್ ಕಟ್ಟದ ಕೋಪದಲ್ಲಿ 2019ರ ಮೇ 11ರಂದು ಶ್ರೀಮತಿ ಶೆಟ್ಟಿ ನೇರವಾಗಿ ಸೂಟರ್ ಪೇಟೆಯ ಸ್ಯಾಮ್ಸನ್ ಮನೆಗೆ ಬಂದು ತರಾಟೆಗೆತ್ತಿಕೊಂಡಿದ್ದರು. ಈ ವೇಳೆ, ಸ್ಯಾಮ್ಸನ್ ಜಗಳ ಕಾಯ್ದಿದ್ದಲ್ಲದೆ, ಮರದ ಸಲಾಕೆಯಲ್ಲಿ ಮಹಿಳೆಯ ತಲೆಗೆ ಬಡಿದು ಸಾಯಿಸಿದ್ದ. ಅಂಗಳದಲ್ಲಿ ನೆಲಕ್ಕುರುಳಿದ್ದ ಮಹಿಳೆಯ ದೇಹವನ್ನು ಮನೆಯೊಳಗಿನ ಬಚ್ಚಲು ಮನೆಗೆ ಒಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ತೆಗೆದು ಶವವನ್ನು ಕತ್ತರಿಸಿ ಕೈ, ಕಾಲು ರುಂಡ ಬೇರ್ಪಡಿಸಿ 29 ತುಂಡುಗಳನ್ನಾಗಿಸಿ ಗೋಣಿಚೀಲದಲ್ಲಿ ತುಂಬಿದ್ದರು. ಇದನ್ನು ಆರೋಪಿ ಸ್ಯಾಮ್ಸನ್ ಒಂದೆರಡು ತುಂಡುಗಳಂತೆ ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಸದ ರಾಶಿಗೆ ಎಸೆದು ಬಂದಿದ್ದ. ಎರಡು ದಿನ ಕಳೆಯುವಾಗ ಮಾಂಸದ ತುಂಡುಗಳನ್ನು ಬೀದಿನಾಯಿಗಳು ಎಳೆದಾಡಿದ್ದವು.
ಕದ್ರಿ ಪಾರ್ಕ್ ಬಳಿ ಪ್ಲಾಸ್ಟಿಕ್ ಗೋಣಿಚೀಲದಲ್ಲಿ ಮಹಿಳೆಯ ರುಂಡದ ಭಾಗ ಪತ್ತೆಯಾಗಿತ್ತು. ಇದನ್ನು ಬೆನ್ನತ್ತಿದ ಕದ್ರಿ ಪೊಲೀಸರಿಗೆ ಹಲವು ಕಡೆಗಳಲ್ಲಿ ಮಹಿಳೆಯ ದೇಹದ ಭಾಗಗಳು ಸಿಕ್ಕಿದ್ದವು. ಆಕೆಯ ಮೊಬೈಲ್ ಲೊಕೇಶನ್, ಕೊನೆಯ ಕರೆ ಆಧರಿಸಿ ತನಿಖೆ ನಡೆಸಿದ ಪೊಲೀಸರು ಸ್ಯಾಮ್ಸನ್ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಕದ್ರಿ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಎಂ. ಮತ್ತು ಬಂದರು ಇನ್ಸ್ ಪೆಕ್ಟರ್ ಶಾಂತರಾಮ್ ತನಿಖೆ ಕೈಗೊಂಡು ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪೊಲೀಸರು ಒದಗಿಸಿದ್ದ 48 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. ಅಲ್ಲದೆ, 141 ದಾಖಲೆಗಳನ್ನು ಆಧರಿಸಿ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ಮಲ್ಲಿಕಾರ್ಜುನ ಎಚ್.ಎಸ್. ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post