ಬೆಂಗಳೂರು: ನಟ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರ ಇಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಡೆಗಳಲ್ಲಿ ಮಾರ್ನಿಂಗ್ ಷೋ ಕ್ಯಾನ್ಸಲ್ ಆಗಿದ್ದರೆ,ಇನ್ನು ಹಲವೆಡೆ ತಾಂತ್ರಿಕ ಕಾರಣಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ.
ದುನಿಯಾ ವಿಜಯ್ ನಟನೆಯ ಸಲಗ ಹಾಗೂ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಚಿತ್ರಗಳು ಒಂದೇ ದಿನ ಪರದೆಗೆ ಬರಲು ಸಿದ್ಧವಾಗಿದ್ದವು. ಆದರೆ ನಿರ್ಮಾಪಕ ಮತ್ತು ಹೂಡಿಕೆದಾರರ ಜಗಳದಿಂದಾಗಿ ಇದು ಸಾಧ್ಯವಾಗಿಲ್ಲ. ಈ ನಡುವೆ ಹೂಡಿಕೆದಾರರು ಪೂರ್ತಿ ಹಣವನ್ನು ಪಾವತಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಸ್ವತಃ ಚಿತ್ರದ ನಾಯಕನಟ ಸುದೀಪ್ ವಿಷಾದದೊಂದಿಗೆ ಕ್ಷಮೆ ಯಾಚಿಸಿದ್ದಾರೆ. ಚಿತ್ರದ ನಿರ್ಮಾಪಕ ಮತ್ತು ಹೂಡಿಕೆದಾರರ ನಡುವಣ ಜಗಳ ಮುಂದುವರಿದಿದ್ದರಿಂದ ನಿಗದಿತ ದಿನಾಂಕದಂದು ಕೋಟಿಗೊಬ್ಬ-3 ಚಿತ್ರ ಬಿಡುಗಡೆಯಾಗಿಲ್ಲ. ಶುಕ್ರವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ.
‘ರಾಜ್ಯದಾದ್ಯಂತ ಗುರುವಾರ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದು ‘ಡೆಕ್ಕನ್ ಹೆರಾಲ್ಡ್’ಗೆ ನಿಕಟವರ್ತಿಗಳು ತಿಳಿಸಿದ್ದಾರೆ.
ಮೊದಲ ದಿನ, ಮೊದಲ ಪ್ರದರ್ಶನ ನೋಡಬೇಕೆಂದು ಗುರುವಾರ ಬೆಳಗ್ಗೆ ಉತ್ಸುಕರಾಗಿ ಚಿತ್ರಮಂದಿರಗಳಿಗೆ ಬಂದಿದ್ದ ಅಭಿಮಾನಗಳ ದಂಡು ಭಾರಿ ನಿರಾಶೆಯಿಂದ ಹೊರನಡೆದರು. ಚಿತ್ರ ಪ್ರದರ್ಶನವಾಗದಿರಲು ಕಾರಣೀಕರ್ತರಾದವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಚಿತ್ರಮಂದಿರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಹೂಡಿಕೆದಾರರಿಗೆ ಪೂರ್ತಿ ಹಾಣ ಪಾವತಿಸಲು ಚಿತ್ರ ನಿರ್ಮಾಪಕ ಸೂರಪ್ಪ ಬಾಬು ಕೆಲವು ದಿನಗಳ ಸಮಯಾವಕಾಶ ನೀಡಲು ಮುಂದಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
‘ಕೋಟಿಗೊಬ್ಬ-3 ವೀಕ್ಷಿಸಲು ಚಿತ್ರಮಂದಿರಗಳಿಗೆ ಬಂದಿರುವ. ಬರುತ್ತಿರುವವರಿಗೆ, ಚಿತ್ರದ ಪ್ರದರ್ಶನ ತಡವಾಗುತ್ತಿರುವ ಬಗ್ಗೆ ತಿಳಿಸಲು ವಿಷಾದಿಸುತ್ತೇನೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ ಎಂದು ಸುದೀಪ್ ತಿಳಿಸಿದ್ದಾರೆ.
ನಾನೂ ಕೂಡ ನನ್ನ ಚಿತ್ರವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ, ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತಿ ದೊಡ್ಡ ಶಕ್ತಿ. ಆದಷ್ಟು ಬೇಗ ಚಿತ್ರದ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತೇನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೆ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗು ಯಾವ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.
Discussion about this post