ಉಳ್ಳಾಲ: ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರ ಮನೆಗೆ ಶನಿವಾರ ಅಂಕೋಲದ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಖ್ಯಾತಿಯ ಅರಣ್ಯವನ್ನೇ ಉಸಿರಾಗಿರಿಸಿಕೊಂಡಿರುವ ತುಳಸಿ ಗೌಡ ಶನಿವಾರ ಭೇಟಿ ನೀಡಿದರು.
ಹಾಜಬ್ಬ ಅವರ ಪದವಿಪೂರ್ವ ಕಾಲೇಜು ನಿರ್ಮಾಣದ ಕನಸನ್ನು ಅರ್ಥಮಾಡಿಕೊಂಡ ತುಳಸಿ ಗೌಡ, ಪದ್ಮಶ್ರೀ ಪಡೆದು ದೆಹಲಿಯಿಂದ ಹಿಂದಿರುಗುವಾಗ ಹಾಜಬ್ಬರ ಶಾಲೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದವರು ಶನಿವಾರ ಬೆಳಗ್ಗೆ ಅವರನ್ನು ಹಾಜಬ್ಬರ ಮನೆಗೆ ಕರೆದುಕೊಂಡು ಬಂದಿದ್ದರು. ಪದ್ಮಶ್ರೀ ಪುರಸ್ಕೃತರಿಬ್ಬರನ್ನು ಜತೆಗೇ ಕಂಡ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪುಳಕಿತರಾದರು.
ಸನ್ಮಾನದ ಹಣ ಶಾಲಾಭಿವೃದ್ಧಿಗೆ: ಹಾಜಬ್ಬ ಅವರ ಮನೆಯಲ್ಲೇ ಬೆಳಗ್ಗಿನ ಉಪಾಹಾರ ಸೇವಿಸಿದ ತುಳಸಿ ಗೌಡ, ಬಳಿಕ ನ್ಯೂಪಡ್ಪು ಸರ್ಕಾರಿ ಶಾಲೆಗೆ ತೆರಳಿದರು. ಆ ವೇಳೆ ಶಾಲಾ ಮಕ್ಕಳು ಮತ್ತು ಶಿಕ್ಷಕರು ಅವರನ್ನು ಬ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ಶಾಲಾ ಸಭಾಂಗಣಕ್ಕೆ ಕರೆದೊಯ್ದರು. ತುಳಸಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಪರಿಸರ ಬಗ್ಗೆ ಕಿವಿಮಾತು ಹೇಳಿದ ತುಳಸಿ ಗೌಡ, ತಮಗೆ ಸಿಕ್ಕ ಸನ್ಮಾನವನ್ನು ಹಾಜಬ್ಬರಿಗೆ ಹಿಂದಿರುಗಿಸಿ, ಸನ್ಮಾನದ ಮೊತ್ತವನ್ನು ಶಾಲಾಭಿವೃದ್ಧಿಗಾಗಿ ಹಾಜಬ್ಬರ ಕೈಗಿತ್ತರು.
ಅವರು ಶಾಲೆ ಕಟ್ಟಿಸಿದರು, ನಾನೇನು ಮಾಡಿದ್ದೇನೆ?: ಮಾಧ್ಯಮಗಳೊಂದಿಗೆ ಮಾತನಾಡಿದ ತುಳಸಿ ಗೌಡ, ಹಾಜಬ್ಬ ಅವರು ಕಿತ್ತಳೆ ಮಾರಿ ಶಾಲೆ ಕಟ್ಟಿಸಿದ್ದಾರೆ. ಇದರಿಂದ ಎಲ್ಲರಿಗೂ ಸಹಾಯವಾಗಿದೆ. ಆದರೆ ನಾನು ಅಂಥದ್ದೇನೂ ಮಾಡಿಲ್ಲ ಎಂದು ಮುಗ್ಧತೆಯ ಮಾತುಗಳನ್ನಾಡಿದರು. ಶಾಲೆ ನೋಡಿ ಬಹಳ ಖುಷಿಯಾಯಿತು. ಇಷ್ಟೆಲ್ಲ ಮಾಡಿದರೂ ಅವರು ಈಗಲೂ ಕುಳಿತುಕೊಳ್ಳದೆ ಓಡಾಡಿಕೊಂಡೇ ಇರುತ್ತಾರೆ. ಹಾಜಬ್ಬನವರು ಶಾಲೆ ಕಟ್ಟುವುದಕ್ಕೆ ನನ್ನ ಕೈಲಾದಷ್ಟು ನೆರವು ಕೊಟ್ಟಿದ್ದೇನೆ. ಸ್ಥಳೀಯರಾದ ನೀವು ಕೂಡ ನಿಮ್ಮಿಂದಾದ ಸಹಾಯ ಮಾಡಿ. ಅವರ ಪದವಿಪೂರ್ವ ಕಾಲೇಜು ನಿರ್ಮಾಣ ಕನಸು ಈಡೇರಬೇಕು. ಅದಕ್ಕಾಗಿ ಎಲ್ಲರೂ ಸಹಕರಿಸಬೇಕು. ನಾವಾದರೂ ದೂರವಿದ್ದೇವೆ. ಆದರೆ ನೀವು ಹತ್ತಿರವಿದ್ದೀರಿ, ಅವರೊಂದಿಗೆ ಕೈಜೋಡಿಸಿ. ನಾನೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ನನ್ನೊಂದಿಗೆ ಅವರಿಗೂ ಪದ್ಮಶ್ರೀ ಸಿಕ್ಕಿರುವುದು ಖುಷಿಯಾಗಿದೆ. ಅಂಕೋಲದಿಂದ ಸರ್ಕಾರಿ ಶಾಲೆ ದೂರದಲ್ಲಿದೆ, ಅದು ಅಂಕೋಲಕ್ಕೆ ಬರಬೇಕೆನ್ನುವುದು ನನ್ನ ಬೇಡಿಕೆ ಎಂದರು.
ಮಕ್ಕಳೊಂದಿಗೆ ಬೆರೆತರು; ಸಾಮಾನ್ಯರಾಗಿದ್ದುಕೊಂಡೆ ಸಾಧನೆ ಮಾಡಿದ ಚೇತನಗಳು ಮಕ್ಕಳೊಂದಿಗೆ ಬೆರೆತರು. ಪದ್ಮ ಪುರಸ್ಕಾರದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದ ಇಬ್ಬರು ದಿಗ್ಗಜರಿಗೆ ಮತ್ತೊಮ್ಮೆ ಅಭಿನಂದನೆ.
Discover more from Coastal Times Kannada
Subscribe to get the latest posts sent to your email.
Discussion about this post