ಎರ್ನಾಕುಲಂ, ನ.14: ಜುಲೈ 28ರಂದು ಕೇರಳದ ಆಳುವದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಆರೋಪಿ ಅಶ‍್ಫಾಕ್ ಆಲಂಗೆ ಎರ್ನಾಕುಲಂ ಪೋಕ್ಸೊ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಜುಲೈ 28ರಂದು ಬಿಹಾರದ ವಲಸೆ ಕಾರ್ಮಿಕನಾದ ಆರೋಪಿ ಅಶ‍್ಫಾಕ್ ಆಲಂ(28) ಕೇರಳದ ಆಳುವದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ. ಆರೋಪಿಯ ವಿರುದ್ಧ ಸೆಕ್ಷನ್ 302, 376 2(ಜೆ), 366ಎ, 364 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇವಿಷ್ಟೇ ಅಲ್ಲದೇ ಆರೋಪಿ ಆಲಂ ವಿರುದ್ಧ ಪೋಕ್ಸೊ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ವಿಚಾರಣೆಯ ನೇತೃತ್ವ ವಹಿಸಿದ್ದ ನ್ಯಾಯಾಧೀಶ ಕೆ. ಸೋಮನ್ ಅವರು ನವೆಂಬರ್ 14ರಂದು ಬೆಳಗ್ಗೆ 11 ಗಂಟೆಗೆ ತಮ್ಮ ತೀರ್ಪನ್ನು ಪ್ರಕಟಿಸಿದರು. ಆಲಂಗೆ ಸೆಕ್ಷನ್ 302ರ ಅಡಿ ಮರಣ ದಂಡನೆ ವಿಧಿಸಿದರೆ, ಪೋಕ್ಸೊ ಕಾಯ್ದೆಯ ಸೆಕ್ಷನ್ ಗಳ ಅಡಿ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಆರೋಪಿ ಆಲಂ ಯಾವುದೇ ಅನುಕಂಪಕ್ಕೆ ಅರ್ಹನಲ್ಲ ಎಂದು ಈ ತೀರ್ಪನ್ನು ಪ್ರಕಟಿಸಿರುವುದಾಗಿ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಮೃತ ಬಾಲಕಿಯು ಬಿಹಾರದ ದಂಪತಿಯ ಪುತ್ರಿಯಾಗಿದ್ದಳು. ಆಕೆಯ ಮೃತದೇಹವು ಜುಲೈ 29ರಂದು ಆಳುವ ಮಾರುಕಟ್ಟೆಯ ಹಿಂಭಾಗದ ಜೌಗು ಪ್ರದೇಶವೊಂದರಲ್ಲಿ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇನ್ನು ಪ್ರಕರಣದ ವಿಚಾರಣೆಯ ವೇಳೆ 41 ಸಾಕ್ಷಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು ಮತ್ತು 13 ದೋಷಾರೋಪಗಳಲ್ಲಿ ಆರೋಪಿ ಆಲಂ ಅಪರಾಧಿ ಎಂಬುದು ದೃಢ ಪಟ್ಟಿದೆ.
Discover more from Coastal Times Kannada
Subscribe to get the latest posts sent to your email.
Discussion about this post