ಮಂಗಳೂರು, ಡಿ.13 : ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣವನ್ನು ರಾಜಕೀಯ ಪ್ರೇರಿತ ಒತ್ತಡದಿಂದಾಗಿ ಪೊಲೀಸರು ಮತಾಂತರ ಕೃತ್ಯ ಎಂದು ಬಿಂಬಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದನ್ನೇ ನೆಪವಾಗಿಟ್ಟು ಮತಾಂತರ ಹೆಸರಲ್ಲಿ ಅಮಾಯಕ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ವುಮೆನ್ ಇಂಡಿಯಾ ಮೂಮೆಂಟ್ (ಡಬ್ಲ್ಯುಐಎಂ) ಸಂಘಟನೆಯ ಅಧ್ಯಕ್ಷೆ ಶಹೀದಾ ತಸ್ನಿಂ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ತಸ್ನಿಂ, ನೂರ್ ಜಹಾನ್ ಎನ್ನುವ ಮಹಿಳೆ ವಿಜಯಲಕ್ಷ್ಮಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದರು. ಆದರೆ ಪೊಲೀಸರು ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಮತಾಂತರ ಕೃತ್ಯ ಎಂದು ನೂರ್ ಜಹಾನ್ ಅವರನ್ನು ಬಂಧಿಸಿದ್ದಾರೆ. ರಾಜಕಾರಣಿಗಳು ಮತ್ತು ಸಂಘ ಪರಿವಾರದ ಒತ್ತಡದಿಂದಾಗಿ ನೂರ್ ಜಹಾನ್ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ಹೇಳಿದರು.
ನಾಗೇಶ್-ವಿಜಯಲಕ್ಷ್ಮೀ ದಂಪತಿ ಸಾವಿಗೆ ಸಂಬಂಧಿಸಿದಂತೆ ನೂರ್ ಜಹಾನ್ ಎಂಬವರ ಮೇಲೆ ಹೊರಿಸಿರುವ ಆರೋಪ ಸ್ವೀಕಾರ್ಹವಲ್ಲ, ವಿಜಯಲಕ್ಷ್ಮೀಯ ಗಂಡ ನಾಗೇಶ್, ಮದ್ಯವ್ಯಸನಿಯಾಗಿದ್ದು, ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ ಈಗಾಗಲೇ ಸುದ್ದಿಯಾಗಿದೆ. ಅಲ್ಲದೇ, ಈ ಹಿಂದೆ ಆ ದಂಪತಿ ಕೆಲಸ ಮಾಡಿಕೊಂಡಿದ್ದ ವಸತಿ ಸಂಕೀರ್ಣದ ನಿವಾಸಿಗಳಿಗೂ ಈ ಕೌಟುಂಬಿಕ ಕಲಹದ ವಿಚಾರ ತಿಳಿದಿರುವುದೇ ಆಗಿದೆ. ಗಂಡನ ಕಿರುಕುಳದ ಕಾರಣದಿಂದ ಇತ್ತೀಚಿಗೆ ವಿಜಯಲಕ್ಷ್ಮೀ ಮನೆ ತೊರೆದಿದ್ದಳು ಮತ್ತು ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದಳು. ಇವೆಲ್ಲದರ ಮಧ್ಯೆ ನೂರ್ ಜಹಾನ್ ವಾಸವಿದ್ದ ವಸತಿ ಸಂಕೀರ್ಣದಲ್ಲಿ ನಾಗೇಶ್-ವಿಜಯಲಕ್ಷ್ಮೀ ದಂಪತಿ ಸ್ವಚ್ಛತೆ ಮತ್ತು ಕಾವಲುಕಾಯುವ ಕೆಲಸ ಮಾಡಿಕೊಂಡಿದ್ದು, ಇದೇ ವೇಳೆ ನೂರ್ ಜಹಾನ್ ಪರಿಚಯವಾಗಿದೆ. ವಿಜಯಲಕ್ಷ್ಮೀ ತನ್ನ ಗಂಡನ ಕಿರುಕುಳ ಮತ್ತು ಜೀವನ ನಿರ್ವಹಣೆಗೆ ಪಡುತ್ತಿದ್ದ ಸಂಕಷ್ಟವನ್ನು ನೂರ್ ಜಹಾನ್ ರೊಂದಿಗೆ ತೋಡಿಕೊಂಡ ಕಾರಣಕ್ಕಾಗಿ ಅವರು ಮಾನವೀಯ ನೆಲೆಯಲ್ಲಿ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಗಂಡನ ಹಿಂಸೆಯಿಂದ ಬೇಸತ್ತು ವಿಜಯಲಕ್ಷ್ಮೀ ಕೆಲ ದಿನಗಳ ವರೆಗೆ ಮನೆಯನ್ನೂ ತೊರೆದಿದ್ದಳು ಮತ್ತು ಅದೇ ಸಂದರ್ಭದಲ್ಲಿ ಗೃಹ ದೌರ್ಜನ್ಯದ ವಿರುದ್ಧ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮಿ ದೂರು ದಾಖಲಿಸಿದ್ದರು. ವಿಜಯಲಕ್ಷ್ಮೀ ಗೃಹ ಹಿಂಸೆಗೆ ಒಳಗಾದ ಓರ್ವ ಸಂತ್ರಸ್ತೆಯಾಗಿದ್ದಾಳೆ ಮತ್ತು ನೂರ್ ಜಹಾನ್ ಓರ್ವ ಜವಾಬ್ದಾರಿಯುತ ನಾಗರಿಕರಾಗಿ ಆಕೆಗೆ ನೆರವು ನೀಡಿದ್ದಾರೆ ಎಂದು ಅವರು ತಿಳಿಸಿದರು.
ನೂರ್ ಜಹಾನ್ ಮತಾಂತರ ಮಾಡಿದ್ದಾಳೆ ಎಂಬ ಬಗ್ಗೆ ಸೂಕ್ತ ಸಾಕ್ಷ್ಯ ಇಲ್ಲದೇ ಇದ್ದರೂ ಬಂಧಿಸಲಾಗಿದೆ. ವಿನಾಕಾರಣ ಆರೋಪ ಹೊರಿಸಿ ಕೇಸು ದಾಖಲಿಸಿ ಹಿಂಸೆ ನೀಡಿದ್ದಾರೆ. ಆಕೆ ಈ ಹಿಂದೆಯೂ ಇಸ್ಲಾಂ ನಂಬಿಕೆ ಹೆಸರಲ್ಲಿ ಯಾರನ್ನೂ ಮತಾಂತರ ಮಾಡಿರುವ ಹಿನ್ನೆಲೆ ಹೊಂದಿಲ್ಲ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಮುಸ್ಲಿಂ ಮತ್ತು ಕ್ರಿಸ್ತಿಯನ್ನರ ವಿರುದ್ಧ ಮತಾಂತರದ ಆರೋಪ ಹೊರಿಸುವ ಹುನ್ನಾರ ಹೊಂದಿದ್ದಾರೆ.
ಈ ಬಗ್ಗೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯ ಮಾಡುತ್ತೇವೆ. ಅಲ್ಲದೆ, ನೂರ್ ಜಹಾನ್ ಗೆ ಹಿಂಸೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಶಹೀದಾ ತಸ್ನಿಂ ಒತ್ತಾಯಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post