ಮಂಗಳೂರು: ಇಲ್ಲಿನ ಉರ್ವ ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದ ಪುನರ್ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವವು ಫೆ.11ರಿಂದ ಫೆ.15ರ ವರೆಗೆ ನೆರವೇರಲಿದೆ ಎಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ತಿಳಿಸಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ.11ರಿಂದ ಬ್ರಹ್ಮಕಲಶೋತ್ಸವದ ವೈದಿಕ ವಿಧಿ-ವಿಧಾನಗಳು ಆರಂಭವಾಗಲಿದ್ದು ಫೆ.13ರಂದು ದೇವರ ಪುನರ್ ಪ್ರತಿಷ್ಠೆ ನೆರವೇರಲಿದೆ. ಫೆ.15ರಂದು ಬ್ರಹ್ಮಕಲಶೋತ್ಸವ ಸಂಪನ್ನವಾಗಲಿದೆ. ಫೆ.16ರಂದು ವರ್ಷಾವಧಿ ಮಹಾಪೂಜೆಗೆ ಪ್ರಸಾದ ಹಾರಿಸುವಿಕೆ, ಫೆ.23 ಚಂಡಿಕಾಯಾಗ, ಫೆ.26 ಹಾಗೂ 27ರಂದು ವರ್ಷಾವಧಿ ಮಹಾಪೂಜೆ ನಡೆಯಲಿದೆ. ಮಾ. 2ರಂದು ಕ್ಷೇತ್ರದ ಶ್ರೀ ಮಲರಾಯ ಪರಿವಾರ ದೈವಗಳ ನೇಮ ನಡೆಯಲಿದೆ ಎಂದರು.
ಫೆ. 9ರಂದು ಹೊರೆಕಾಣಿಕೆ ಮೆರವಣಿಗೆ : ಹೊರೆಕಾಣಿಕೆ ಮೆರವಣಿಗೆಯನ್ನು ಭವ್ಯವಾಗಿ ಸಂಘಟಿಸುವ ನಿಟ್ಟಿನಲ್ಲಿ ವಿಶೇಷವಾಗಿ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಫೆ.9ರಂದು ಮಧ್ಯಾಹ್ನ 3ಕ್ಕೆ ಹೊರೆಕಾಣಿಕೆ ಮೆರವಣಿಗೆಯು ಕೂಳೂರು ಗೋಲ್ಡ್ ಪಿಂಚ್ ಸಿಟಿ ಮೈದಾನದಿಂದ ಹಾಗೂ ನಗರದ ಕೇಂದ್ರ ಮೈದಾನದಿಂದ ಏಕಕಾಲದಲ್ಲಿ ಹೊರಡಲಿದೆ. ಎರಡೂ ಕಡೆಯ ಹೊರೆಕಾಣಿಕೆಯ ಮೆರವಣಿಗೆಯು ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಒಟ್ಟು ಸೇರಿ ಕ್ಷೇತ್ರಕ್ಕೆ ಆಗಮಿಸಲಿದೆ ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಆಡಳಿತ ವ್ಯವಸ್ಥೆಯಿಂದ ಬೇಕಾದ ಎಲ್ಲ ಕ್ರಮಗಳ ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದರು.
6 ಕೋ.ರೂ ವೆಚ್ಚದ “ಶ್ರೀ ಮಾರಿಯಮ್ಮ ಸಮುದಾಯ ಭವನ’ : ಸುಮಾರು 6 ಕೋ.ರೂ. ವೆಚ್ಚದಲ್ಲಿ ಶ್ರೀ ಮಾರಿಯಮ್ಮ ಸಮುದಾಯ ಭವನ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಭಕ್ತರ ಸಹಕಾರದಿಂದ ಸಾಕಾರವಾಗುತ್ತಿದೆ. ಉದ್ಘಾಟನೆ ಫೆ.3ರಂದು ಬೆಳಗ್ಗೆ 10ಕ್ಕೆ ನೆರವೇರಲಿದೆ ಎಂದು ಡಾ| ಜಿ. ಶಂಕರ್ ತಿಳಿಸಿದರು.
ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ, ಪ್ರ. ಸಂಚಾಲಕ ಗೌತಮ್ ಸಾಲ್ಯಾನ್ , ಪ್ರ. ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ ವಸಂತ ಅಮೀನ್ ಬೈಕಂಪಾಡಿ, 7 ಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ, ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್, ಪ್ರಚಾರ ಸಮಿತಿಯ ಯಶವಂತ ಬೋಳೂರು, ಪ್ರಮುಖರಾದ ಶಿವಾನಂದ್, ಗಣೇಶ್ ಕುಲಾಲ್, ಉಷಾರಾಣಿ, ಶಶಿಧರ ಕೋಡಿಕಲ್, ಮಾಧವ ಸುವರ್ಣ, ಭರತ್ ಉಳ್ಳಾಲ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post