ಕುರಿಗಾಹಿ , ಜನಪದ ಗಾಯಕ , ಸರಿಗಮಪ , ಸ್ಪರ್ಧಿಯಾದ ಬಾಳು ಬೆಳಗುಂದಿ ಸಾಹಿತ್ಯ ಹಾಗೂ ಗಾಯನದ ಸಾಂಗ್ ವೈರಲ್.
ಸ್ಯಾಂಡಲ್ ವುಡ್ ನ ಯಶಸ್ವಿ ಕಾಂಬಿನೇಷನ್ ನಿರ್ದೇಶಕ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ “ಬ್ರ್ಯಾಟ್”(BRAT) ಚಿತ್ರದ “ಗಂಗಿ ಗಂಗಿ” ಎಂಬ ಮಾಸ್ ಹಾಡು ಅದ್ದೂರಿಯಾಗಿ ಇತ್ತೀಚಿಗೆ ಬೆಂಗಳೂರು ನಗರದ ಮಂತ್ರಿ ಮಾಲ್ ನ ಒಳ ಆವರಣದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಗೊಂಡು ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಈ “ಬ್ರ್ಯಾಟ್” ಚಿತ್ರವನ್ನು ಮಂಜುನಾಥ್ ಕಂದಕೂರ್ ಅದ್ದೂರಿಯಾಗಿ ನಿರ್ಮಿಸುತ್ತಿದ್ದು , ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇಂದು ಬಿಡುಗಡೆಯಾಗಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ ತಾವೇ ರಚಿಸಿ ಹಾಡಿದ್ದಾರೆ. ಇವರೊಂದಿಗೆ ಗಾಯಕಿ ಇಂದು ನಾಗರಾಜ್ ಕೂಡ ಸಾಥ್ ನೀಡಿದ್ದಾರೆ. ಯಶಸ್ವಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಂಪೋಸಿಂಗ್ ನಲ್ಲಿ ಬಂದಿರುವ ಈ ಹಾಡಿಗೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮುಂಬೈ ಬೆಡಗಿ ಅನೈರಾ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಈ ಹಾಡು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಗೊಂಡ ನಂತರ ಚಿತ್ರತಂಡ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಈ ಚಿತ್ರದ ನಿರ್ದೇಶಕ ಶಶಾಂಕ್ ಮಾತನಾಡುತ್ತಾ ಈ ಚಿತ್ರದ ಶೀರ್ಷಿಕೆ ಬಗ್ಗೆ ಕ್ಲಾರಿಟಿ ಕೊಡ್ತೀನಿ, “ಬ್ರ್ಯಾಟ್” ಎಂದರೆ ತರ್ಲೆ ಹುಡುಗ , ಒಂದು ರೀತಿ ದಾರಿ ತಪ್ಪಿದ ಮಗ ಎಂದು ಹೇಳಬಹುದು. ಇದೊಂದು ಅಪ್ಪ-ಮಗನ ಕಥೆಯಾಗಿದ್ದು , ಭರ್ಜರಿ ಆಕ್ಷನ್ , ಥ್ರಿಲ್ಲರ್ ಜೊತೆಗೆ ಮನೋರಂಜನೆಯ ಅಂಶವು ತುಂಬಿಕೊಂಡಿದೆ. ಇಡೀ ಚಿತ್ರ ಆರಂಭದಿಂದ ಕೊನೆಯವರೆಗೂ ಎಲ್ಲಿಯೂ ಬೇಸರವಾಗದೆ ಸಂಪೂರ್ಣ ಎಂಟರ್ಟೈನ್ಮೆಂಟ್ ಸಿಗಲಿದೆ. ಒಂದೊಂದೇ ಹಾಡನ್ನು ವಿಭಿನ್ನ ರೀತಿಯಲ್ಲಿ ಬಿಡುಗಡೆ ಮಾಡುತ್ತಿದ್ದು ,ಈಗಾಗಲೇ ಸಿದ್ ಶ್ರೀರಾಮ್ ಹಾಡಿರುವ “ನಾನೇ ನೀನಂತೆ” ಎಂಬ ಹಾಡು ಎಲ್ಲೆಡೆ ಬಾರಿ ವೈರಲ್ ಆಗಿದ್ದು , ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಜನಪ್ರಿಯವಾಗಿದೆ. ಈಗ ಬಿಡುಗಡೆಯಾಗಿರುವ “ಗಂಗಿ ಗಂಗಿ” ಎಂಬ ಮಾಸ್ ಹಾಡನ್ನು ಗ್ರಾಮೀಣ ಪ್ರತಿಭೆ , ಜನಪದ ಗಾಯಕ ಬಾಳು ಬೆಳಗುಂದಿ ಹಾಗೂ ನಾಯಕಿ ಇಂದು ನಾಗರಾಜ್ ಅದ್ಭುತವಾಗಿ ಹಾಡಿದ್ದಾರೆ. ನಮ್ಮ ಚಿತ್ರದಲ್ಲಿ ಬಹಳಷ್ಟು ಹೈಲೈಟ್ ಗಳಿದ್ದು , ಅದರಲ್ಲಿ ಅರ್ಜುನ್ ಜನ್ಯ ಅವರ ಸಂಗೀತ ಕೂಡ ಅಷ್ಟೇ ಸೊಗಸಾಗಿ ಪ್ರತಿ ಹಾಡು ಮೂಡಿಬಂದಿದೆ. ಈಗಾಗಲೇ ನನ್ನ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ನಲ್ಲಿ ಬಂದಿದ್ದ “ಕೌಸಲ್ಯ ಸುಪ್ರಜಾ ರಾಮ” ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಈಗ ಮತ್ತೊಮ್ಮೆ ನಿಮ್ಮ ಮುಂದೆ “ಬ್ರ್ಯಾಟ್” ಚಿತ್ರವನ್ನು ನವೆಂಬರ್ 14 ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ , ಆನಂದ್ ಆಡಿಯೋ ಮೂಲಕ “ಬ್ರ್ಯಾಟ್” ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದರು.
ನಟ ಡಾರ್ಲಿಂಗ್ ಕೃಷ್ಣ ಮಾತನಾಡುತ್ತಾ ಈ ಚಿತ್ರದ ಕಥೆ ಬಹಳ ವಿಭಿನ್ನವಾಗಿದೆ. ಅದರಲ್ಲೂ ವಿಶೇಷವಾಗಿ ನನ್ನ ಲುಕ್ ಡಿಫ್ರೆಂಟ್ ಆಗಿದೆ. ನಾನು ಡ್ಯಾನ್ಸ್ ಮಾಡಿ ಸುಮಾರು ಮೂರು ನಾಲ್ಕು ವರ್ಷಗಳೇ ಕಳೆದಿತ್ತು , ಈ ಹಾಡಿಗೆ ಸ್ಟೆಪ್ಸ್ ಹಾಕಲು ಕಾರಣ ನಮ್ಮ ನಿರ್ದೇಶಕ ಶಶಾಂಕ್. ಈ ಹಾಡು ಇಷ್ಟು ಚೆನ್ನಾಗಿ ಬಂದಿದೆ ಎಂದರೆ ಅದರ ಎಲ್ಲಾ ಕ್ರೆಡಿಟ್ ನಮ್ಮ ನೃತ್ಯ ನಿರ್ದೇಶಕ ಹಾಗೂ ಡೈರೆಕ್ಟರ್ ಗೆ ಸಲ್ಲಬೇಕು. ಹಾಗೆಯೇ ಈ “ಗಂಗಿ ಗಂಗಿ” ಹಾಡು ಇಷ್ಟು ಜೋಶ್ ನಲ್ಲಿ ಬರಲು ಬಾಳು ಬೆಳಗುಂದಿ ಅವರ ಸಾಹಿತ್ಯ, ಗಾಯನ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಪ್ರಮುಖ ಕಾರಣ ಕಾರಣವಾಗಿದೆ. ಹಾಗೆಯೇ ಈ ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರಿಗಿರುವ ಸಿನಿಮಾ ಮೇಲಿನ ಪ್ರೀತಿಯೇ ಈ ಚಿತ್ರವು ಇಷ್ಟು ಸೊಗಸಾಗಿ ಬಂದಿದೆ. ಅದೇ ರೀತಿ ಇಂದು ಬಿಡುಗಡೆಯಾಗಿರುವ ಈ ಮಾಸ್ ಹಾಡು ಅದ್ದೂರಿಯಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರ ಬರಲಿದೆ ನೀವೆಲ್ಲರೂ ನೋಡಿ ಎಂದರು. ಇನ್ನು ಈ ಚಿತ್ರದ ನಟಿ ಮನಿಶಾ ಕಂದಕೂರ್ ಮಾತನಾಡುತ್ತಾ ನಾನು ಕೂಡ ಕನ್ನಡದವಳು , ಇದು ನನ್ನ ಮೊದಲನೆಯ ಚಿತ್ರ. ಈ ಚಿತ್ರದಲ್ಲಿ ನನ್ನದು ಮಧ್ಯಮ ವರ್ಗದ ಹುಡುಗಿ ಪಾತ್ರ. ಸಿನಿಮಾ ಬಹಳ ಸೊಗಸಾಗಿ ಮೂಡಿ ಬಂದಿದೆ. ಪ್ರತಿಯೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ಈಗ ಬಿಡುಗಡೆಯಾಗಿರುವ “ಗಂಗಿ ಗಂಗಿ” ಹಾಡು ಬಹಳ ಚೆನ್ನಾಗಿದೆ ಎಂದು ಹೇಳಿದರು.
ಈ ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡುತ್ತಾ ನಮ್ಮ “ಫಸ್ಟ್ ರ‍್ಯಾಂಕ್ ರಾಜು” ಚಿತ್ರದ ನಂತರ ನಾನು ನಿರ್ಮಾಣ ಮಾಡುತ್ತಿರುವ ಎರಡನೇ ಚಿತ್ರ “ಬ್ರ್ಯಾಟ್”. ನನಗೆ ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು , ಹಾಗಾಗಿ ಈ ಸಿನಿಮಾ ಮಾಡಲು ನಿರ್ಧರಿಸಿದೆ. ಅಂದುಕೊಂಡಂತೆ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಹಾಗೆಯೇ ನಟ ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಚಿತ್ರವು ಮತ್ತೊಂದು ಸೂಪರ್ ಹಿಟ್ ಆಗಲಿದೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಸೊಗಸಾಗಿದೆ , ಎಲ್ಲರೂ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಎಂದರು.
ಗ್ರಾಮೀಣ ಪ್ರತಿಭೆ ಬಾಳು ಬೆಳಗುಂದಿ ಮಾತನಾಡುತ್ತಾ: ಕುರಿಗಾಹಿಯಾಗಿದ್ದ ನಾನು ಬಹಳಷ್ಟು ಜನಪದ ಗೀತೆಗಳನ್ನು ಬರೆದು ಹಾಡುತ್ತಿದ್ದೆ. ಒಂದು ಉತ್ತಮ ವೇದಿಕೆಯಾಗಿ “ಸರಿಗಮಪ” ದಲ್ಲಿ ಅವಕಾಶ ಸಿಕ್ಕಿತು. ಆ ಕಾರ್ಯಕ್ರಮದ ಜಡ್ಜ್ ಆಗಿದ್ದ ಅರ್ಜುನ್ ಜನ್ಯ ಸರ್ ಅವರು ನನ್ನ ಹಾಡನ್ನು ಗಮನಿಸಿ ನನ್ನ ಸಂಗೀತದ ಸಿನಿಮಾದಲ್ಲಿ ನಿನಗೊಂದು ಅವಕಾಶ ಕೊಡುತ್ತೇನೆ ಎಂದಿದ್ದರು , ಅದರಂತೆ ಈ ಸಿನಿಮಾದಲ್ಲಿ ನನ್ನಿಂದ ಗೀತ ರಚನೆಯು ಬರೆಸಿ ಹಾಡಲು ಅವಕಾಶವನ್ನು ನೀಡಿದ್ದಾರೆ. ಅವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಹಾಗೆಯೇ ಈ ಚಿತ್ರದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು. ಇನ್ನು ಈ ಒಂದು ಕಾರ್ಯಕ್ರಮದಲ್ಲಿ ಚಿತ್ರದಲ್ಲಿ ನಟಿಸಿರುವ ಡ್ಯಾಗನ್ ಮಂಜು ಸೇರಿದಂತೆ ಕಿದ್ವಾಯ್ ಸಂಸ್ಥೆಯ ವೈದ್ಯ ರಾಮಚಂದ್ರ ಹಾಗೂ ಬದರಿನಾಥ್ ಸೇರಿದಂತೆ ಬಹಳಷ್ಟು ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು. ಎಲ್ಲಾ ಅಂದುಕೊಂಡಂತೆ ಚಿತ್ರ ಮೂಡಿ ಬಂದಿದ್ದು , ಅದ್ದೂರಿ ಪ್ರಚಾರದ ಮೂಲಕ ನವಂಬರ್ 14ರಂದು ಚಿತ್ರ ತೆರೆಯ ಮೇಲೆ ಬಿಡುಗಡೆಯಾಗಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post