ಮಂಗಳೂರು: ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಹೆಣ್ಣು ಮಗು ಎಂದು ದಾಖಲೆ ನೀಡಿ ಬಳಿಕ ಮಗುವಿನ ಹೆಚ್ಚಿನ ಚಿಕಿತ್ಸೆಗೆ 18 ದಿನಗಳ ಬಳಿಕ ಬೇರೆ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ಮಗು ಗಂಡು ಎಂದು ತಿಳಿದು ಬಂದಿದ್ದು, ಪೋಷಕರಲ್ಲಿ ಗೊಂದಲ ಉಂಟು ಮಾಡಿದೆ.
ಕುಂದಾಪುರದ ಮಹಿಳೆಯೋರ್ವರನ್ನು ಸೆಪ್ಟೆಂಬರ್ 27ರಂದು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಿಸಲಾಗಿತ್ತು. ಅವರಿಗೆ ಬಿಪಿ ಇದ್ದ ಕಾರಣ ಆಪರೇಷನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಈ ಸಂದರ್ಭ ಹೆಣ್ಣು ಮಗು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು ಎಂದು ಮಗುವಿನ ತಂದೆ ಮುಸ್ತಫಾ ಹೇಳಿದ್ದಾರೆ.
ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ 18 ದಿನಗಳ ಕಾಲ ಲೇಡಿಗೋಶನ್ ಆಸ್ಪತ್ರೆಯ ಐಸಿಯು ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ಸ್ಪಷ್ಟ ಮಾಹಿತಿ ನೀಡದ ಕಾರಣ ಮಗುವನ್ನು ಬೃಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಮಗು ಗಂಡು ಎಂದು ತಿಳಿದು ಬಂದಿದೆ. ನಂತರ ನಾವು ಮಗುವನ್ನು ಮತ್ತೆ ಲೇಡಿಗೋಶನ್ ಆಸ್ಪತ್ರೆಗೆ ಕರೆತಂದು ವೈದ್ಯಾಧಿಕಾರಿ ಬಳಿ ಈ ಕುರಿತು ಪ್ರಶ್ನಿಸಿದಾಗ ಈ ಮಗು ನಿಮ್ಮದೇ ಆಗಿದ್ದು, ನಮ್ಮ ದಾಖಲೆಯಲ್ಲಿ ತಪ್ಪಾಗಿ ನಮೂದಿಸಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿರುವುದಾಗಿ ಮಗುವಿನ ತಂದೆ ಮುಸ್ತಫಾ ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದುರ್ಗಾಪ್ರಸಾದ್ ಎಂ ಆರ್ ಅವರು ಪ್ರತಿಕ್ರಿಯಿಸಿದ್ದು, “ಆಸ್ಪತ್ರೆಯಲ್ಲಿ ಯಾವುದೇ ಮಗುವನ್ನು ಅದಲು ಬದಲು ಮಾಡಿಲ್ಲ. ದಾಖಲೆಯಲ್ಲಿ ನಮೂದಿಸುವ ವೇಳೆ ತಪ್ಪಾಗಿದೆ. ಹೆಣ್ಣು ಮಗು ಎಂದು ವೈದ್ಯರು ತಪ್ಪಾಗಿ ಉಲ್ಲೇಖಿಸಿದ್ದಾರೆ. ಆದರೆ, ಜನಿಸಿದ್ದು ಗಂಡು ಮಗು” ಎಂದು ತಿಳಿಸಿದ್ದಾರೆ.
“ಮಗುವಿನ ಲಿಂಗ ಉಲ್ಲೇಖಿಸುವ ಸಂದರ್ಭ ತಪ್ಪಾಗಿದೆ. ಇದಕ್ಕೆ ನಾವು ಕ್ಷಮೆ ಕೋರುತ್ತೇವೆ. ಆದರೆ, ಮಗುವನ್ನು ಅದಲು ಬದಲಾಗಿದೆ ಮಾಡಲಾಗಿದೆ ಎಂದು ಹೇಳುವುದು ತಪ್ಪು” ಎಂದಿದ್ದಾರೆ.
ಮಗುವಿಗೆ ಆರೋಗ್ಯ ಸಮಸ್ಯೆಗಳಿವೆ ಎಂಬ ಆರೋಪವನ್ನು ಉಲ್ಲೇಖಿಸಿದ ದುರ್ಗಾಪ್ರಸಾದ್, “ಕುಂದಾಪುರ ಆಸ್ಪತ್ರೆಯ ಆರೋಪದಂತೆ ಆಸ್ಪತ್ರೆಯು ತಪಾಸಣೆಗಳನ್ನು ಕೈಗೊಂಡಿದೆ. ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.