ಮಂಗಳೂರು: 2005ರಲ್ಲಿ ನಡೆದ ಕೋಮು ಗಲಭೆಯ ಸಂದರ್ಭದ ಗಲಾಟೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯಕ್ಕೆ ಹಾಜರಾಗದೆ ಬರೋಬ್ಬರಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಅವರ ಅಪರಾಧ ಪತ್ತೆ ತಂಡ ಶನಿವಾರ (ನವೆಂಬರ್ 14) ಬಂಧಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
2005ರ ಗಲಾಟೆ ಮತ್ತು ಎಲ್ಪಿಸಿ (LPC) ವಾರಂಟ್ ಹಿನ್ನೆಲೆ: 2005ರಲ್ಲಿ ನಡೆದ ಕೋಮು ಗಲಭೆಯ ವೇಳೆ ಕೊಲೆಯಾಗಿದ್ದ ಪೊಳಲಿ ಅನಂತು ಎಂಬಾತನ ಶವ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆರೋಪಿ ಮನೋಜ್ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು (ಅ.ಕ್ರ: 101/2005 ಹಾಗೂ ಅ.ಕ್ರ: 104/2005) ದಾಖಲಾಗಿದ್ದವು.
ಪ್ರಕರಣ ದಾಖಲಾದ ಬಳಿಕ 2007ರಲ್ಲಿ ವಿದೇಶಕ್ಕೆ ತೆರಳಿದ್ದ ಆರೋಪಿ, ನಂತರ ಭಾರತಕ್ಕೆ ಮರಳಿದ್ದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದಲ್ಲಿ ವಾಸವಿದ್ದು ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಮಂಗಳೂರಿನ 3ನೇ ಜೆಎಂಎಫ್ಸಿ ನ್ಯಾಯಾಲಯವು ಎರಡು ಪ್ರಕರಣಗಳಲ್ಲಿ (LPC No: 26/2016 ಮತ್ತು LPC No: 50/2016) ಎಲ್ಪಿಸಿ ವಾರಂಟ್ ಹೊರಡಿಸಿತ್ತು.
ದೀರ್ಘಕಾಲದಿಂದ ತಲೆಮರೆಸಿಕೊಂಡಿರುವ ವಾರಂಟ್ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಅವರ ಅಪರಾಧ ತಂಡ, ಶನಿವಾರ ಆರೋಪಿ ಮನೋಜ್ನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.
Discover more from Coastal Times Kannada
Subscribe to get the latest posts sent to your email.






Discussion about this post