ಮಂಗಳೂರು, ನ.11: ಯುವಕನೊಬ್ಬ ಬಂಟ್ವಾಳ ಮಾಣಿ ಜಂಕ್ಷನ್ ಬಳಿಯ ಮೈದಾನದಲ್ಲಿ ಪಟಾಕಿ ಅಂಗಡಿ ಬಳಿ ನಿಂತಿದ್ದಾಗ, ಜಗದೀಶ್ ಜೈನ್ ಎಂಬಾತ ಬೊಲೇರೋ ವಾಹನದಲ್ಲಿ ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಟ್ವಾಳ ಮಾಣಿ ನಿವಾಸಿ ವಿಕೇಶ್ ಕೆ. (32) ಎಂಬವರು ನೀಡಿದ ದೂರಿನ ಪ್ರಕಾರ, ನ.9ರಂದು ಸಂಜೆ ಮಾಣಿ ಜಂಕ್ಷನ್ನಲ್ಲಿರುವ ಮೈದಾನದ ಪಟಾಕಿ ಅಂಗಡಿಯ ಬಳಿ ನಿಂತಿದ್ದ ವೇಳೆ, ಅವರಿಗೆ ಪರಿಚಯವಿರುವ ಜಗದೀಶ್ ಜೈನ್ ಎಂಬಾತ ಬೊಲೆರೋ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ವಾಹನ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳಲು ವಿಕೇಶ್ ಅವರು ಬೊಲೆರೋ ಜೀಪಿನ ಬಾನೆಟ್ ಮೇಲೆ ಹಾರಿ ಪಕ್ಕದಲ್ಲಿದ್ದ ಮಣ್ಣಿನ ಮೇಲೆ ಬಿದ್ದಿದ್ದಾರೆ. ಈ ವೇಳೆ ಅವರ ಎಡಕಾಲಿನ ಮೊಣಕಾಲಿಗೆ ಗುದ್ದಿದ ಗಾಯವಾಗಿದೆ. ಇದೇ ಸಂದರ್ಭದಲ್ಲಿ ವಿಕೇಶ್ ಅವರ ಸಂಬಂಧಿಕ ತೀರ್ಥಪ್ರಸಾದ್ ಅವರಿಗೂ ವಾಹನದಿಂದ ಡಿಕ್ಕಿ ಹೊಡೆಯಲು ಆರೋಪಿ ಯತ್ನಿಸಿದ್ದು, ಅವರು ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳದಲ್ಲಿ ಜನರು ಸೇರುವುದನ್ನು ಕಂಡ ಆರೋಪಿ, ವಿಕೇಶ್ ಅವರನ್ನು ಅವಾಚ್ಯವಾಗಿ ನಿಂದಿಸಿ, ಮುಂದಕ್ಕೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 232/2026ರಂತೆ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 109, 118(1), 352 ಹಾಗೂ 351(2)ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Discover more from Coastal Times Kannada
Subscribe to get the latest posts sent to your email.






Discussion about this post