ಮೈಸೂರು, ಜ16: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀ ರಾಮನ ಪ್ರತಿಮೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ. ಸಂಕ್ರಾಂತಿ ದಿನವಾದ ಸೋಮವಾರ ಈ ಕುರಿತು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ. ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.
ಅಯೋಧ್ಯೆಯ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್. ಡಿ. ಕೋಟೆಯದ್ದು ಎಂಬುದು ಕರ್ನಾಟಕಕ್ಕೆ ಮತ್ತೊಂದು ಗರಿಯಾಗಿದೆ. ಶ್ರೀ ರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿಗೆ ವಿವಿಧ ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಮೂವರು ಶಿಲ್ಪಿಗಳು ಕೆತ್ತನೆ ಮಾಡಿರುವ ವಿಗ್ರಹಗಳನ್ನು ಕಳೆದ ವಾರ ಆಯ್ಕೆ ಮಾಡಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆ ಸಹ ಆಯ್ಕೆಯಾಗಿತ್ತು. ಆದರೆ ಈ ಕುರಿತು ಅಧಿಕೃತ ಘೋಷಣೆಯಾಗಿರಲಿಲ್ಲ.
ಪ್ರಾಣ ಮೂರ್ತಿ ಪ್ರತಿಷ್ಠಾಪನೆ ಪೂರ್ವಭಾವಿ ವಿಧಿಗಳು ಜನವರಿ 16ರಂದು ಆರಂಭವಾಗಲಿದೆ. ಜನವರಿ 21ರ ತನಕ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಪ್ರತಿಷ್ಠಾಪನೆಯ ಅಗತ್ಯವಿರುವ ಕೆಲವು ವಿಧಿಗಳು ಮಾತ್ರ ಜನವರಿ 22ರಂದು ನಡೆಯಲಿದೆ. ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ವಿಗ್ರಹ 150 ರಿಂದ 200 ಕೆಜಿ ತೂಕವಿದೆ. ರಾಮನನ್ನು ಐದು ವರ್ಷದ ಬಾಲಕನ ಪ್ರತಿರೂಪದಂತೆ ಕೆತ್ತನೆ ಮಾಡಲಾಗಿದೆ. ಕಳೆದ 70 ವರ್ಷಗಳಿಂದ ಪೂಜಿಸಲಾಗುತ್ತಿರುವ ರಾಮ ಲಲ್ಲಾನ ವಿಗ್ರಹವನ್ನು ಸಹ ನೂತನ ದೇವಾಲಯದ ಗರ್ಭಗುಡಿಯಲ್ಲಿ ಇಟ್ಟು ಪೂಜಿಸಲಾಗುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post