ಮಂಗಳೂರು: ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್‌ಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಪ್ರಕಟಗೊಂಡಿದೆ.
2020ರ ಜನವರಿ 20ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ ಇರಿಸಿ ಹೋಗಿದ್ದ ಬ್ಯಾಗಿನಲ್ಲಿ ಕಂಡು ಬಂದ ಶಂಕಾಸ್ಪದ ವಸ್ತುಗಳು ಸ್ಪೋಟಕಗಳಾಗಿತ್ತು ಎಂಬುದು ಎಫ್ ಎಸ್‌ಎಲ್ ಪರೀಕ್ಷೆಯಿಂದ ಸಾಬೀತಾಗಿತ್ತು. ಆದಿತ್ಯ ರಾವ್ ವಿರುದ್ಧ 700 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತನಿಖಾಧಿಕಾರಿಗಳು ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದಿತ್ಯ ರಾವ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯ ಆತನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ 20 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ಉಡುಪಿ ಜಿಲ್ಲೆಯ ಮಣಿಪಾಲ ಮೂಲದ ಆದಿತ್ಯ ರಾವ್, ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, 2018ರಲ್ಲಿ ಬೆಂಗಳೂರು ಏರ್ಪೋರ್ಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ಇದರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಆದಿತ್ಯ ರವ್, ಅನೇಕ ಬಾರಿ ಏರ್ಪೋರ್ಟ್ಗೆ ಕರೆ ಮಾಡಿ ಬಾಂಬ್ ಇರಿಸಿದ್ದಾಗಿ ಹೇಳಿದ್ದ. ಹೀಗೆ ಹಲವು ಬಾರಿ ಹುಸಿ ಬಾಂಬ್ ಕರೆ ನೀಡಿದ್ದ ಈತ ಒಮ್ಮೆ ನಿಜವಾಗಿಯೂ ಬಾಂಬ್ ಇರಿಸಿದ್ದ. ಈ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು.