ಬೆಂಗಳೂರು (ಸೆ.16): ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದಿಢೀರ್ ಅಸ್ವಸ್ಥಳಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ನಾಟಕೀಯ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಗುರುವಾರ ಚೈತ್ರಾಳನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಟ್ಟಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಚೈತ್ರಾ ಶುಕ್ರವಾರ ಬೆಳಗ್ಗೆ ಎದ್ದು ಒಂದು ಗಂಟೆ ಯೋಗ ಹಾಗೂ ಧ್ಯಾನ ಮಾಡಿದ್ದಳು.
ಸೆಪ್ಟೆಂಬರ್ 12ರಂದು ರಾತ್ರಿ ಉಡುಪಿಯಲ್ಲಿ ಬಂಧಿತಳಾಗಿದ್ದ ಚೈತ್ರಾ ಮತ್ತು ಇತರ ನಾಲ್ವರನ್ನು ಕೋರ್ಟ್ 10 ದಿನಗಳ ಅವಧಿಗೆ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ. ಚೈತ್ರಾಳನ್ನು ರಾತ್ರಿ ಸಾಂತ್ವನ ಕೇಂದ್ರದಲ್ಲಿಟ್ಟು ಬೆಳಗ್ಗೆ ಸಿಸಿಬಿ ಕಚೇರಿಗೆ ತಂದು ವಿಚಾರಣೆ ನಡೆಸಲಾಗುತ್ತಿತ್ತು. ಇದೀಗ ಆಕೆ ಸಿಸಿಬಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ಬಯಲಿಗೆ ಬಂದಿದೆ. ಹಿಂದುತ್ವದ ಪ್ರಖರ ಪ್ರತಿಪಾದಕಿಯಾಗಿದ್ದು, ಈಗ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಕೆ ಈಗ ಭಾರಿ ಅಪಮಾನಕ್ಕೆ ಗುರಿಯಾಗಿರುವುದರಿಂದ ತಾನು ಈ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗುವುದು ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಆಕೆ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ ಎಂದು ನಂಬಲಾಗಿದೆ.
ಚೈತ್ರಾ ಮೂರ್ಛೆ ನಾಟಕ: ಮೂರ್ಛೆ ರೋಗ ಬಂದಿದೆ ಎಂದು ಚೈತ್ರಾ ಕುಂದಾಪುರ ಎಂಬಾಕೆಯನ್ನು ಸಿಸಿಬಿ ಪೊಲೀಸರು ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಇಸಿಜಿ, ಬಿಪಿ, ಶುಗರ್ ಎಲ್ಲವೂ ನಾರ್ಮಲ್ ಇದೆ. ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲಾ ಪರೀಕ್ಷೆ ಮಾಡಲಾಗಿದೆ. ಮೂರ್ಛೆ ರೋಗದಿಂದ ಆಕೆ ಕುಸಿದು ಬಿದ್ದಿಲ್ಲ. ಆಕೆ ಬಾಯಲ್ಲಿ ನೊರೆ ಇರಲಿಲ್ಲ. ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆರೋಪಿ ಚೈತ್ರಾ ಸಿಸಿಬಿ ಪೊಲೀಸರ ವಿಚಾರಣೆ ತಪ್ಪಿಸಿಕೊಳ್ಳಲು ಮೂರ್ಛೆ ನಾಟಕ ಮಾಡಿದ್ದಾಳೆ ಎನ್ನಲಾಗಿದೆ.
ಚೈತ್ರಾಳಿಗೆ ಈ ಹಿಂದೆ ಮೂರ್ಛೆ ರೋಗ ಇತ್ತು. ಸಾರ್ವಜನಿಕ ಭಾಷಣದ ವೇಳೆ ಮೂರ್ಛೆ ಹೋಗಿದ್ದಳು ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತತೆ ಇಲ್ಲ. ವಿಚಾರಣೆ ವೇಳೆ ಆಕೆಗೆ ಮೂರ್ಛೆ ಬಂದಿರಲಿಲ್ಲ. ಬದಲಾಗಿ ಆಕೆ ಮೂರ್ಛೆ ಹೋದ ಹಾಗೆ ನಟಿಸಿ ಡ್ರಾಮ ಸೃಷ್ಟಿಸಿದ್ದಾಳೆ. ಸಿಸಿಬಿ ಪೊಲೀಸರು ಶನಿವಾರ ಆಕೆಯ ಆರೋಗ್ಯ ಚೇತರಿಕೆ ನೋಡಿಕೊಂಡು ಮತ್ತೆ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ.