ಮಂಗಳೂರು, ಸೆ.16: ಪ್ರೀತಿ ಹರಡಲಿ ಎಲ್ಲೆಡ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ ೪ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 21ರಂದು ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವೈವಿಧ್ಯ ಭಾರತದಲ್ಲಿ ಪ್ರೀತಿಯ ಸಭೆಗಳು ಎಂಬ ವಿಷಯದಲ್ಲಿ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ನಡೆಯಲಿದೆ.
ವಿಚಾರ ಸಂಕಿರಣದ ಉದ್ಘಾಟನೆಯನ್ನು ನಾಡಿನ ಹಿರಿಯ ಪತ್ರಕರ್ತರು, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟುರವರು ನೆರವೇರಿಸಲಿದ್ದು, ವಿಷಯ ಮಂಡನೆಯನ್ನು ಖ್ಯಾತ ಸಾಹಿತಿಗಳು, ಬರಹಗಾರರಾದ ಡಾ. ಕೆ.ಶರೀಪಾರವರು ಮಾಡಲಿದ್ದಾರೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ರಾದ ಕೆ.ಅಶ್ರಫ್ ರವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವಹಿಸಲಿದ್ದಾರೆ.ಉದ್ಘಾಟನಾ ಸಮಾರಂಭದ ಮೊದಲು 9.30ಕ್ಕೆ ಏಕತಾರಿ ಹಾಡುಗಾರ ನಾದಾ ಮಣಿನಾಲ್ಕೂರು ಬಳಗ ಹಾಗೂ ಜನಪ್ರೀತಿ ಬಳಗದವರಿಂದ ಪ್ರೀತಿಯ ಸಿಂಚನ ಎಂಬ ಸೌಹಾರ್ದ ಗಾಯನ ಕಾರ್ಯಕ್ರಮ ನಡೆಯಲಿದೆ.
ಪ್ರೀತಿ ಹಾಗೂ ಸೇವೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಹೃದಯಗಳನ್ನು ಗೆದ್ದ ಜಗತ್ತಿನ ಮಹಾತಾಯಿ ಸಂತ ಮದರ್ ತೆರೇಸಾರವರ ಚಿಂತನೆ ಹಾಗೂ ಆದರ್ಶಗಳನ್ನು ಇಂದಿನ ಯುವಪೀಳಿಗೆಯ ಮಧ್ಯೆ ಕೊಂಡೊಯ್ಯವ ಸಲುವಾಗಿ 2017ರಲ್ಲಿ ಜನ್ಮ ತಾಳಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯು ವಿಚಾರ ಸಂಕಿರಣ,ಸಂವಾದ,ಸೌಹಾರ್ದ ಹಬ್ಬಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸರ್ವ ಧರ್ಮದ ಜನತೆಯ ಪ್ರೀತಿ ವಿಶ್ವಾಸಗಳನ್ನು ಗಳಿಸಿದೆ. ಮಾತ್ರವಲ್ಲದೆ ಮಾನವೀಯ ಹೃದಯಗಳನ್ನೊಳಗೊಂಡ ಜಾತ್ಯಾತೀತರ ಹಾಗೂ ಸೌಹಾರ್ದ ಕೂಟವಾಗಿ ಹೊರಹೊಮ್ಮಿದ. ನಗರದ ಖ್ಯಾತ ವಿಚಾರವಾದಿಗಳು, ಪ್ರಾಧ್ಯಾಪಕರು, ಸಾಹಿತಿಗಳು, ಪತ್ರಕರ್ತರು, ಪ್ರಗತಿಪರ ಚಿಂತಕರು, ಉದ್ಯಮಿಗಳು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ದಲಿತ, ಆದಿವಾಸಿ, ಮಧ್ಯಮ ವರ್ಗದ ನೌಕರರ ಸಂಘಟನೆಗಳ ಮುಖಂಡರು ಸೇರಿದಂತೆ ಸರ್ವ ಧರ್ಮದ 130 ರಷ್ಟು ಗಣ್ಯಾತಿಗಣ್ಯರು ಈ ವೇದಿಕೆಯಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡು ಸಕ್ರಿಯರಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಚಟುವಟಿಕೆಗಳನ್ನು ಇನ್ನಷ್ಟು ಮುತುವರ್ಜಿಯಿಂದ ನಡೆಸುವ ಮೂಲಕ ಮಂಗಳೂರಿನ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳಸುವುದೇ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಮೂಲ ಆಶಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು: ಲೋಯ್ ಕ್ಯಾಸ್ಟಲಿನೊ ಸುನಿಲ್ ಕುಮಾರ್ ಬಜಾಲ್ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ, ಸಂತ ಮದರ್ ತೆರೇಸಾಳ ವಿಚಾರ ವೇದಿಕೆ, ಮಂಗಳೂರು ಮಂಜುಳಾ ನಾಯಕ್ (ಜಂಟಿ ಕಾರ್ಯದರ್ಶಿ, ಸಂತ ಮದರ್ ತೆರೇಸಾ ವಿಚಾರ ವೇದಿಕೆ), ಡೋಲ್ಟಿ ಡಿಸೋಜ (ಖಜಾಂಚಿ, ಸಂತ ಮದರ್ ತೆರೇಸಾ ವಿಚಾರ ವೇದಿಕೆ), ಆಲ್ವಿನ್ ಡಿಸೋಜ (ಗೌರವ ಸಲಹೆಗಾರರು, ಸಂತ ಮದರ್ ತೆರೇಸಾ ವಿಚಾರ ವೇದಿಕೆ), ಮುನೀರ್ ಕಾಟಿಪಳ್ಳ (ಗೌರವ ಸಲಹೆಗಾರರು, ಸಂತ ಮದರ್ ತೆರೇಸಾ ವಿಚಾರ ವೇದಿಕೆ), ಸ್ಪಾನಿ ಡಿ ಶುನ್ನಾ (ಸಂಚಾಲಕರು, ಮಾಧ್ಯಮ ಸಮಿತಿ).
Discover more from Coastal Times Kannada
Subscribe to get the latest posts sent to your email.
Discussion about this post