ಬೆಂಗಳೂರು: ಆರು ತಿಂಗಳ ಹಿಂದೆ ನಡೆದ ವೈದ್ಯೆಯೊಬ್ಬರ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಎಫ್ಎಸ್ಎಲ್ ವರದಿಯ ಹಿನ್ನೆಲೆಯಲ್ಲಿ, ವೈದ್ಯೆ ಪತ್ನಿಗೆ ಅರಿವಳಿಕೆ ಔಷಧಿ ನೀಡಿ ಕೊಲೆಗೈದ ಗಂಭೀರ ಆರೋಪದ ಮೇಲೆ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
“ಕೃತಿಕಾ ಎಂ.ರೆಡ್ಡಿ ಅವರನ್ನು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ 2025ರ ಏಪ್ರಿಲ್ 21ರಂದು ಮಾರತ್ತಹಳ್ಳಿ ವ್ಯಾಪ್ತಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ರೋಗಿಯನ್ನು ಪರೀಕ್ಷಿಸಿದ್ದ ವೈದ್ಯರು, ಈಗಾಗಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಆಗ ಯುಡಿಆರ್ ಪ್ರಕರಣ ದಾಖಲಾಗಿತ್ತು. ಬಳಿಕ ಕೃತ್ಯ ನಡೆದ ಸ್ಥಳಕ್ಕೆ ತೆರಳಿದ ಸೋಕೋ (ಎಸ್.ಒ.ಸಿ.ಒ) ತಂಡದವರು ಸ್ಥಳ ಪರಿಶೀಲನೆ ನಡೆಸಿ ಘಟನಾ ಸಂದರ್ಭದಲ್ಲಿ ಬಳಕೆಯಾಗಿದ್ದ ಕ್ಯಾನೂಲಾ ಸೆಟ್, ಇಂಜೆಕ್ಷನ್ ಟ್ಯೂಬ್ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿದ್ದರು. ಅಲ್ಲದೆ, ಮೃತದೇಹದಿಂದ ವಿಸೆರಾ ಮಾದರಿಗಳನ್ನು ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಎಫ್ಎಸ್ಎಲ್ನ ತಜ್ಞರು ವಿಸೆರಾ ಮಾದರಿಗಳನ್ನು ಪರೀಕ್ಷಿಸಿ, ಮೃತಳ ದೇಹದ ಅಂಗಾಂಗಗಳಲ್ಲಿ ಈ ಅರಿವಳಿಕೆ ಪದಾರ್ಥ ಪತ್ತೆಯಾಗಿದೆ. ಬಳಿಕ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ, ವೃತ್ತಿಯಲ್ಲಿ ವೈದ್ಯನಾದ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿ, ಕೊಲೆ ಮಾಡಿರಬಹುದೆಂದು 13/10/2025ರಂದು ದೂರು ಸಲ್ಲಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಉಡುಪಿಯ ಮಣಿಪಾಲದಿಂದ ಬಂಧಿಸಿದ್ದಾರೆ” ಎಂದು ಆಯುಕ್ತರು ಮಾಹಿತಿ ನೀಡಿದರು.
2024ರ ಮೇ 26ರಂದು ಡಾ.ಮಹೇಂದ್ರ ರೆಡ್ಡಿ ಮತ್ತು ಡಾ.ಕೃತಿಕಾ ರೆಡ್ಡಿಯ ವಿವಾಹವಾಗಿತ್ತು. ದಂಪತಿ ಗುಂಜೂರಿನಲ್ಲಿರುವ ಅವರ ಮನೆಯಲ್ಲಿ ವಾಸವಾಗಿದ್ದರು. ಆದರೆ, ಮದುವೆಯಾದ ಸ್ವಲ್ಪ ದಿನಗಳ ನಂತರ ಅಳಿಯ ನನ್ನ ಮಗಳ ಬಗ್ಗೆ ಅಷ್ಟಾಗಿ ಕಾಳಜಿ ತೋರಿಸುತ್ತಿರಲಿಲ್ಲ. ಮಗಳಿಗೆ ಯಾವುದೇ ಹಣಕಾಸಿನ ಸಹಾಯ ಮಾಡದೇ, ಅವಳಿಂದಲೇ ಹಣ ಪಡೆಯುತ್ತಿದ್ದ.
21/04/2025ರಂದು ರಾತ್ರಿ ಕೃತಿಕಾಗೆ ಗ್ರಾಸ್ಟ್ರಿಕ್ ಸಮಸ್ಯೆ ಇದೆ ಎಂದು ಮಹೇಂದ್ರ ರೆಡ್ಡಿ ತನ್ನ ಮನೆಯಲ್ಲೇ ಆಕೆಯ ಬಲಗಾಲಿಗೆ ಐವಿ ಕ್ಯಾನ್ಯುಲಾ ಔಷಧಿ ಕೊಡಲು ಚುಚ್ಚಿದ್ದಾನೆ. ಬಳಿಕ 22/04/2025ರಂದು ಬೆಳಗ್ಗೆ ಅವಳಿಗೆ ವಿಶ್ರಾಂತಿ ಬೇಕೆಂದು ನಮ್ಮ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದ. ನಂತರ ಕೆಲಸಕ್ಕೆ ಹೋಗಿ ಮತ್ತೆ ಅದೇ ದಿನ ರಾತ್ರಿ ನಮ್ಮ ಮನೆಗೆ ಬಂದು ರಾತ್ರಿ ವೇಳೆ ನನ್ನ ಮಗಳಿಗೆ ಔಷಧಿ ಕೊಟ್ಟಿದ್ದ.
ಅಂದೂ ಕೂಡ ನನ್ನ ಮಗಳು ಎಂದಿನಂತೆ ಊಟ ಮಾಡಿಕೊಂಡು ಆರೋಗ್ಯವಾಗಿದ್ದಳು. ಆದರೆ, 23/04/2025ರಂದು ಮಧ್ಯಾಹ್ನ ಮಗಳಿಗೆ ಕಾಲಿನಲ್ಲಿ ಹಾಕಿರುವ ಐವಿ ಕ್ಯಾನ್ಯುಲಾದಿಂದ ತನಗೆ ವಿಪರೀತ ನೋವಾಗುತ್ತಿದೆ. ಇದನ್ನು ತೆಗೆಯಬಹುದೇ ಎಂದು ವಾಟ್ಸ್ಆ್ಯಪ್ ಮೂಲಕ ಕೇಳಿದ್ದಕ್ಕೆ, ಅದನ್ನು ತೆಗೆಯಬೇಡ. ಮತ್ತೊಂದು ಡೋಸ್ ಕೊಟ್ಟರೆ ಮತ್ತೆ ನೋವು ಬರುವುದಿಲ್ಲ ಎಂದು ನಂಬಿಸಿದ್ದ.
ಅಲ್ಲದೆ, ಅದೇ ದಿನ ರಾತ್ರಿ 9:00 ಗಂಟೆಗೆ ಬಂದ ಆತ ಐವಿ ಮೂಲಕ ಔಷಧಿಗಳನ್ನು ನೀಡಿದ್ದ. 24/04/2025ರಂದು ಬೆಳಗ್ಗೆ ಸುಮಾರು 07:30ರ ಸಮಯದಲ್ಲಿ ಕೃತಿಕಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಯಿತು. ಆಕೆ ಮಾತನಾಡದೇ ಇದ್ದಾಗ ಕೂಡಲೇ ನಾನು ಮತ್ತು ಅಳಿಯ ಮಹೇಂದ್ರ ರೆಡ್ಡಿ ನಮ್ಮ ಕಾರಿನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿನ ವೈದ್ಯರು ಪರೀಕ್ಷಿಸಿ, ಆಕೆ ಬರುವಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಬಳಿಕ ನನ್ನ ಅಳಿಯ ವೈದ್ಯನಾಗಿದ್ದರೂ ಸಹ ಮಗಳಿಗೆ ಸಿಪಿಆರ್ ಸಹ ಮಾಡಿಲ್ಲ. ಆತ ಮತ್ತು ಅವರ ಮನೆಯವರು ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿಸುವುದು ಬೇಡ, ನಾವು ಆಕೆಯ ಮೃತದೇಹವನ್ನು ನಮ್ಮ ಊರಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಒತ್ತಾಯ ಮಾಡಿದರು. ಆದರೂ ಸಹ ನನ್ನ ಹಿರಿಯ ಮಗಳು ಡಾ.ನಿಕಿತಾ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ಯುಡಿಆರ್ ದಾಖಲಿಸಲಾಗಿತ್ತು. ಅಳಿಯ ಮಹೇಂದ್ರ ರೆಡ್ಡಿ ನನ್ನ ಮಗಳಿಗೆ ಐವಿಯ ಮೂಲಕ ಅನಸ್ತೇಶಿಯಾ ಔಷಧಿ ನೀಡಿ ಕೊಲೆ ಮಾಡಿದ್ದಾನೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಂದೆ ಕೆ.ಮುನಿರೆಡ್ಡಿ ದೂರಿನಲ್ಲಿ ಆಗ್ರಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post