ಮಂಗಳೂರು : ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಿಂದ ಮಡ್ರಾಸ್ ಐ (ಕೆಂಗಣ್ಣು) ರೋಗ ಹಲವರಲ್ಲಿ ಕಾಣಿಸಿಕೊಂಡಿದೆ. ಕೆಂಗಣ್ಣು ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಕಳೆದ ಮೂರು ವಾರದಲ್ಲಿ 1,440 ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳ ಮಕ್ಕಳಲ್ಲಿ ಕೆಂಗಣ್ಣು ಕಾಣಿಸಿಕೊಂಡಿರುವುದು ವರದಿಯಾಗಿದೆ. ಮಕ್ಕಳಲ್ಲಿ ಇದು ಹರಡುತ್ತಿರುವುದರಿಂದ ಪೋಷಕರಲ್ಲಿ ಆತಂಕವು ಹೆಚ್ಚಾಗಿದೆ. ಕೆಂಗಣ್ಣು ಸಾಮಾನ್ಯ ರೋಗವಾಗಿದ್ದು, ಮಳೆಗಾಲ ಕಳೆದ ತಕ್ಷಣ ಕಾಣಿಸಿಕೊಳ್ಳುತ್ತದೆ. ಈ ಬಾರಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಕಣ್ಣಿನ ರೋಗ ಕಾಣಿಸಿಕೊಂಡಿದೆ. ಈ ರೋಗ ಕಾಣಿಸಿಕೊಂಡರೆ ಆತಂಕಗೊಳ್ಳಬೇಕಿಲ್ಲ. ನಾಲ್ಕೈದು ದಿನಗಳಲ್ಲಿ ಸಹಜ ಸ್ಥಿತಿಗೆ ಬರಲಿದೆ. ಕೆಂಗಣ್ಣು ರೋಗ ಕಾಣಿಸಿಕೊಂಡರೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಕುಮಾರ್ ತಿಳಿಸಿದ್ದಾರೆ.