ಬೆಂಗಳೂರು, ಡಿ.16: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪಟ್ಟಿಯನ್ನು ಎನ್ಐಎ ಬಿಡುಗಡೆ ಮಾಡಿದೆ. ಈ ಎಲ್ಲಾ ಆರೋಪಿಗಳು ನಿಷೇಧಿತ ಪಿಎಫ್ಐ ಪ್ರಕರಣಗಳು, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ.
ಕೇರಳದ 11 ಆರೋಪಿಗಳು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮೂವರು, ಕರ್ನಾಟಕ ಹಾಗೂ ತಮಿಳುನಾಡಿನ ಐವರು ಆರೋಪಿಗಳ ಹೆಸರು ಪ್ರಕಟಿಸಲಾಗಿದೆ. ಆರೋಪಿಗಳ ಹೆಸರು, ಭಾವಚಿತ್ರ, ವಿಳಾಸ ಸಹಿತ ಮಾಹಿತಿ ಪ್ರಕಟಿಸಿ ಸುಳಿವು ಸಿಕ್ಕಲ್ಲಿ ಎನ್ಐಎಗೆ ವಾಟ್ಸ್ಆ್ಯಪ್ ಅಥವಾ ದೂರವಾಣಿ ಕರೆ ಮೂಲಕ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಬೆಳ್ಳಾರೆ ಮುಸ್ತಫಾ, ಮಸೂಧ್ ಅಗ್ನಾಡಿ, ಮೊಹಮ್ಮದ್ ಷರೀಫ್ ಕೊಡಾಜೆ, ಉಮ್ಮರ್ ಅಲಿಯಾಸ್ ಉಮರ್ ಫಾರೂಕ್, ಅಬೂಬ್ಬಕ್ಕರ್ ಸಿದ್ದಿಕ್ ಹೆಸರು ಪ್ರಕಟಿಸಲಾಗಿದೆ.
ಕುಂಭಕೋಣಂ ರಾಮಲಿಂಗಂ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ಐವರು ಹಾಗೂ ಪಾಲಕ್ಕಾಡ್ ಶ್ರೀನಿವಾಸ್ ಕೇಸ್ನಲ್ಲಿ ಭಾಗಿಯಾಗಿದ್ದ ಕೇರಳದ ಅಬ್ದುಲ್ ವಹಾಬ್, ಅಬ್ದುಲ್ ರಷೀದ್, ಆಯೂಬ್ ಸೇರಿ ನಾಲ್ವರು ಆರೋಪಿಗಳ ಹೆಸರು ಪ್ರಕಟಿಸಲಾಗಿದೆ.
ನಿಷೇಧಿತ ಪಿಎಫ್ಐಗೆ ನೇಮಕ, ಒಳಸಂಚು, ಸರ್ಕಾರದ ವಿರುದ್ಧ ಪಿತೂರಿ, ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರಲು ಆರೋಪಿಗಳು ಯತ್ನಿಸಿದ ಆರೋಪ ಇವರ ಮೇಲಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಮಾಹಿತಿಗಳನ್ನು ಎನ್ಐಎ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post