ಮಂಗಳೂರು: “ಜನವರಿ 19, 20 ಮತ್ತು 21ರಂದು ಮೂರು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಸನ್ ಸೆಂಟರ್ ನಲ್ಲಿ ಮಂಗಳೂರು ಲಿಟ್ ಫೆಸ್ಟ್ ಆರನೇ ಆವೃತ್ತಿಯು ಜರುಗಲಿದೆ” ಎಂದು ಸುನಿಲ್ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಒಟ್ಟು 29 ಅವಧಿಗಳನ್ನು ಪ್ರಸ್ತುತ ಉತ್ಸವವು ಹೊಂದಿದೆ. ಎರಡು ವೇದಿಕೆಗಳು ಮತ್ತು ಹರಟೆ ಕಟ್ಟೆ ಇವುಗಳಲ್ಲಿ 60ಕ್ಕೂ ಅಧಿಕ ಸಾಹಿತಿಗಳು, ವಾಗ್ಮಿಗಳು ಭಾಗವಹಿಸಲಿದ್ದಾರೆ. ಈ ಬಾರಿಯ ಲಿಟ್ ಫೆಸ್ಟ್ ಗೌರವಕ್ಕೆ ‘ವನಿತಾ ಸೇವಾ ಸಮಾಜ’ ಧಾರವಾಡ ಈ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. 19ರಂದು ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಲಕ್ಷ್ಮೀಶ ತೋಳ್ವಾಡಿ, ಹೆಸರಾಂತ ಕಲಾವಿದೆ ರಾಧೆ ಜಗ್ಗಿ, ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ವಿನಯ್ ಹೆಗ್ಡೆ, ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ರವಿ ಮತ್ತು ವನಿತಾ ಸೇವಾ ಸಮಾಜ ಧಾರವಾಡ ಇದರ ಕಾರ್ಯದರ್ಶಿ ಮಧುರಾ ಹೆಗಡೆ ಅವರು ಭಾಗಿಯಾಗಲಿದ್ದಾರೆ. ಹೆಸರಾಂತ ಭರತನಾಟ್ಯ ಕಲಾವಿದೆ ರಾಧೆ ಜಗ್ಗಿ (ದಿನಾಂಕ 19ರ ಸಾಯಂಕಾಲ) ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾದ ಸಂದೀಪ್ ನಾರಾಯಣ್ (ದಿನಾಂಕ 20ರ ಸಾಯಂಕಾಲ) ಕಾರ್ಯಕ್ರಮ ನಡೆಯಲಿದೆ.
“ಸಿನಿಮಾ ಪ್ರದರ್ಶನ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಕಾರ್ಕಳದ ವಂದನಾ ರೈ ಅವರಿಂದ ಮಕ್ಕಳಿಗಾಗಿ ‘ಚಿಣ್ಣರ ಅಂಗಳ’ ನಡೆಯಲಿದೆ. ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಪ್ಲೇ ಮಾಡೆಲಿಂಗ್, ದೇಶೀ ಆಟಗಳು ಸೇರಿದಂತೆ ಲೇಖಕರು ಮತ್ತು ಪ್ರಮುಖರೊಂದಿಗೆ ಸಂವಾದ ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆಯಾಗಿದೆ. ಸಾಹಿತ್ಯ ಲೋಕದ ಮೂರು ಸಾಧಕರು, ಕುವೆಂಪು, ಬೇಂದ್ರೆ ಮತ್ತು ಪಂಜೆ ಮಂಗೇಶರಾಯರ ಕುರಿತು ವಿಶೇಷ ಅವಧಿಗಳು ಜರುಗಲಿವೆ. ವಾಗಗ್ಮಿಗಳು, ಸಾಹಿತಿಗಳು, ಸಂಶೋಧಕರು, ವಿಷಯ ಪರಿಣಿತರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ
ಇರಲಿದ್ದಾರೆ” ಎಂದು ಶ್ರೀರಾಜ್ ಗುಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುನಿಲ್ ಕುಲಕರ್ಣಿ, ಶ್ರೀರಾಜ್ ಗುಡಿ, ದುರ್ಗಾ ರಾಮದಾಸ್ ಕಟೀಲ್, ದಿಶಾ ಸಿ ಶೆಟ್ಟಿ, ಈಶ್ವರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post