ಬೆಳ್ತಂಗಡಿ: ಪತ್ನಿಗೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ನಾಯಿಕಟ್ಟೆ ನಿವಾಸಿ ಚಿದಾನಂದ ಕೆ.ಆರ್. ವಿರುದ್ಧವೇ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. – ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತಿಯ ವಿರುದ್ದ ಪತ್ನಿ ರಾಜೀರಾಘವನ್ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಚಿದಾನಂದ ಅವರಿಗೆ ಪ್ರಸಕ್ತ ಜಾಮೀನು ಲಭಿಸಿದೆ. – ನನ್ನ ವಿರುದ್ದ ಪತ್ನಿ ಸುಳ್ಳು ಕೇಸು ದಾಖಲಿಸಿದ್ದಾಳೆ ಎಂದು ಚಿದಾನಂದ ಆರೋಪಿಸಿದ್ದಾರೆ. ವಿದೇಶದಿಂದ ಬಂದ ಬಳಿಕ ವಾಪಸ್ ಹೋಗುವುದು ಬೇಡ ಎಂದು ಹೇಳಿದ್ದಕ್ಕೆ ನನ್ನನ್ನು ಗದರಿಸಿದ್ದು, ವಿವಾಹ ವಿಚ್ಛೇದನ ಕೇಳಿದ್ದಳು. ಒಪ್ಪದಿದ್ದಾಗ ಪುತ್ರಿ ಮತ್ತು ನನಗೆ ಮಾನಸಿಕ ಕಿರುಕುಳ ನೀಡಿದ್ದಳು. ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕವಿರುವ ಕೇರಳದ ವ್ಯಕ್ತಿಯೋರ್ವ ನನಗೆ ಬೆದರಿಕೆ ಕರೆ ಮಾಡಿದ್ದ. ಬಳಿಕ ಆ.26ರಂದು ರಾತ್ರಿ ಮೂರು ಮೊಬೈಲ್, 95 ಸಾವಿರ ರೂ. ನಗದು ಹಾಗೂ ತಾಯಿಯ ಚಿನ್ನಾಭರಣ ಕೊಂಡು ಹೋಗಿದ್ದಾಳೆ ಎಂದು ಚಿದಾನಂದ ತಿಳಿಸಿದ್ದಾರೆ.
ಉಗ್ರ ಸಂಪರ್ಕ ಸುಳಿವು ಪತ್ತೆಯಾಗಿಲ್ಲ:
ಚಿದಾನಂದ ಅವರು ಪತ್ನಿ ವಿರುದ್ಧ ಪೊಲೀಸ್ ಅಧೀಕ್ಷಕರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಉಗ್ರ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ, ಆರೋಪಕ್ಕೆ ಪುಷ್ಟಿ ನೀಡುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದೂರಿನಲ್ಲಿ ಹೇಳಿದಂತೆ ಆಕೆ ಪಾಕಿಸ್ತಾನದ ಶಾಲಾ ವಾಹನದಲ್ಲಿ ಕೆಲಸ ಮಾಡುತ್ತಿರಲಿಲ್ಲ. ದುಬೈಯ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪಾಸ್‌ಪೋರ್ಟ್ ತಪಾಸಣೆ ಮಾಡಿದಾಗ ದುಬೈ ಬಿಟ್ಟು ಬೇರೆ ಎಲ್ಲಿಗೂ ಪ್ರಯಾಣ ಮಾಡಿಲ್ಲ. ಉಗ್ರ ಸಂಪರ್ಕ ಆರೋಪಕ್ಕೆ ಸಂಬಂಧಿಸಿ ಯಾವುದೇ ಸುಳಿವು ಪತ್ತೆಯಾಗಿಲ್ಲ. ಪತಿ-ಪತ್ನಿಯ ನಡುವಿನ ವೈಮನಸ್ಸಿನಿಂದ ದೂರು ನೀಡಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಕ್ಕನ ಮನೆಯಲ್ಲಿ ವಾಸ :
ಪತ್ನಿ ರಾಜೀರಾಘವನ್ ಆ.26ರಂದು ನಾಪತ್ತೆ ಯಾಗಿದ್ದು, ಪತ್ತೆ ಮಾಡಿಕೊಡುವಂತೆ ಧರ್ಮಸ್ಥಳ ಠಾಣೆಗೆ ಚಿದಾನಂದ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆ ಮಾಡಿ ಠಾಣೆಗೆ ಕರೆ ತಂದಿದ್ದು, ಈ ಸಂದರ್ಭ ಆಕೆ ಪತಿಯ ಮನೆಗೆ ಹೋಗಲು ಮನಸ್ಸಿಲ್ಲವೆಂದು ಆಕೆಯ ಅಕ್ಕನೊಂದಿಗೆ ಹೋಗಿದ್ದಾರೆ.