ಮಂಗಳೂರು: ಸಿನಿಮಾ, ನಾಟಕ ಪ್ರದರ್ಶನಗಳಿಗೆ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡುವ ಮೂಲಕ ಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರ ನೆರವಾಗಬೇಕು ಎಂದು ಕಲಾವಿದರಾದ ದೇವದಾಸ್ ಕಾಪಿಕಾಡ್, ವಿಜಯ್‌ಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ. ಶೆಟ್ಟಿ, ಸಿನಿಮಾ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಹಾಗೂ ಮೋಹನ್ ಕೊಪ್ಪಲ ಒತ್ತಾಯಿಸಿದರು.
ಗುರುವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ಶಾಲೆ–ಕಾಲೇಜುಗಳು ತೆರೆದಿವೆ. ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಅದರೆ, ಜಿಲ್ಲೆಯಲ್ಲಿ ಸಿನಿಮಾ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡಿಲ್ಲ. ಇದರಿಂದಲೇ ಜೀವನ ಸಾಗಿಸುವ ಕಲಾವಿದರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ, ರಾಜ್ಯ ಸರ್ಕಾರಕ್ಕೆ ವಿಷಯ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಾವು ಕಲಾವಿದರು ಸ್ವಾಭಿಮಾನಿಗಳು ನಮಗೆ ಸರ್ಕಾರಿ ಕಿಟ್ ಅಥವಾ ನೆರವು ಬೇಕಿಲ್ಲ ನಮ್ಮನ್ನು ಬದುಕಲು ಬಿಡಿ ಕಲಾ ಚಟುವಟಿಕೆಗಳನ್ನು ನಡೆಸಲು ಅವಕಾಶ ಮಾಡಿಕೊಡಲಿ , ‘ಕಲೆಯನ್ನು ನಂಬಿಕೊಂಡ ನೂರಾರು ಕುಟುಂಬಗಳು ಇವೆ. ಒಂದೂವರೆ ವರ್ಷದಿಂದ ಪ್ರದರ್ಶನ ಇಲ್ಲದೆ, ಕಲಾವಿದರು ನಿರ್ಗತಿಕರಾಗಿದ್ದಾರೆ. ಜಿಲ್ಲೆಯಲ್ಲಿ 30ಕ್ಕೂ ಮಿಕ್ಕಿ ನಾಟಕ ತಂಡಗಳು, 5,000ಕ್ಕೂ ಹೆಚ್ಚು ಕಲಾವಿದರು ಇದ್ದಾರೆ. ಕಲಾವಿದರು ಸಂಕಷ್ಟದಲ್ಲಿದ್ದಾಗ ಸರ್ಕಾರ ನೆರವಾಗಿಲ್ಲ. ನಮಗೆ ನಾಟಕ ಪ್ರದರ್ಶನ, ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಅವಕಾಶ ನೀಡಿ, ಕಲಾವಿದರ ಕುಟುಂಬಕ್ಕೆ ನೆರವಾಗಬೇಕು’ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.
ಇಲ್ಲಿಯ ಸಂಸ್ಕೃತಿ, ಭಾಷೆಗೆ ತುಳು ನಾಟಕಗಳು, ಸಿನಿಮಾಗಳು ವಿಶೇಷ ಕೊಡುಗೆ ನೀಡಿವೆ. ಮುಂಬರುವ ದಸರಾ, ದೀಪಾವಳಿ ಹಬ್ಬದ ದಿನಗಳಲ್ಲಿ ಎಲ್ಲ ತಂಡಗಳಿಗೂ ಪ್ರತಿದಿನ ಪ್ರದರ್ಶನಕ್ಕೆ ಅವಕಾಶ ನೀಡಲು ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು ಎಂದು ಕಿಶೋರ್ ಶೆಟ್ಟಿ ವಿನಂತಿಸಿದರು.
ಚಿತ್ರ ಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಬಿಡುಗಡೆಗೊಳಿಸಲು ಅವಕಾಶ ನೀಡಬೇಕು. ಈಗಾಗಲೇ ಕೆಲವು ಸಿನಿಮಾ ಮಂದಿರಗಳು ಮುಚ್ಚಿವೆ. ಇನ್ನುಳಿದವನ್ನಾದರೂ ಉಳಿಸುವ ಪ್ರಯತ್ನ ಮಾಡಬೇಕು. ಚಿತ್ರಮಂದಿರಗಳಿಗೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಿ, ಶೇ 100ರ ಸಾಮರ್ಥ್ಯದಲ್ಲಿ ಅವಕಾಶ ನೀಡಬೇಕು ಎಂದು ವಿಜಯಕುಮಾರ್ ಕೊಡಿಯಾಲ್ ಬೈಲ್ ಆಗ್ರಹಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post