ಮಂಗಳೂರು: ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಶ್ರೇಯೋಭಿವೃದ್ದಿಗಾಗಿ ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಅವಿರತ ಶ್ರಮಿಸುತ್ತಿರುವ ಅನಿವಾಸಿ ಉದ್ಯಮಿ ಮತ್ತು ಸಮಾಜ ಕಲ್ಯಾಣ ಕಾರ್ಯಕರ್ತ ಶ್ರೀ ಮೈಕಲ್ ಡಿಸೊಜಾ ಅವರು ನವೆಂಬರ್ 4 ಮತ್ತು 5 ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಆವರಣದಲ್ಲಿ ಬಸ್ತಿ ವಾಮನ ಶೆಣೈ ವೇದಿಕೆಯಲ್ಲಿ ನಡೆಯುವ 25 ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದಾರೆ.
ಪ್ರಸ್ತುತ ಅಬುದಾಬಿಯಲ್ಲಿ ನೆಲೆಸಿರುವ ಶ್ರೀ ಮೈಕಲ್ ಡಿಸೊಜಾ, ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ ಇವರ ಅಭಿಮಾನಿ ಹಾಗೂ ನಿಕಟವರ್ತಿ ಆಗಿದ್ದವರು. ದೇಶ – ವಿದೇಶಗಳಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಕಾರ್ಯಕ್ರಮಗಳಿಗೆ ನಿರಂತರ ಪೋಶಕರಾಗಿದ್ದ ಶ್ರೀ ಮೈಕಲ್ ಡಿಸೊಜಾ, ಕೊಂಕಣಿ ಲೇಖಕರಿಗೆ ಪುಸ್ತಕ ಪ್ರಕಟಿಸಲು 40 ಲಕ್ಷ ರುಪಾಯಿ ಅನುದಾನ, ಕೊಂಕಣಿ ಗೀತ ಸಾಹಿತ್ಯ, ಸಂಗೀತ ಸಂಯೋಜನೆ ಮತ್ತು ಪ್ರಸ್ತುತಿಗಾಗಿ ಸುಮಾರು 10 ಲಕ್ಷ ಹಾಗೂ ಕೊಂಕಣಿ ಸಿನೆಮಾಕ್ಕಾಗಿ 25 ಲಕ್ಷ ಅನುದಾನವನ್ನು ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಈಗಾಗಲೇ ಮುಡಿಪಾಗಿಟ್ಟಿದಾರೆ. ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗಾಗಿ 25 ಕೋಟಿ ರುಪಾಯಿ ಮೌಲ್ಯದ ’ಎಡುಕೇರ್’ ವಿದ್ಯಾರ್ಥಿನಿಧಿಯನ್ನು ಸ್ಥಾಪಿಸಿದ್ದು ಸಿ.ಒ.ಡಿ.ಪಿ. ಸಂಸ್ಥೆಯ ಮೂಲಕ ಈ ವರೆಗೆ ಸುಮಾರು 3,500 ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಯೋಜನ ಪಡೆದಿರುತ್ತಾರೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ. ನಂದಗೋಪಾಲ ಶೆಣೈ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಗೋಕುಲದಾಸ ಪ್ರಭು ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿದ್ದು, ಕೊಂಕಣಿ ಕವಿ ಟೈಟಸ್ ನೊರೊನ್ಹಾ ಕಾರ್ಯದರ್ಶಿ ಮತ್ತು ಪತ್ರಕರ್ತ ಎಚ್. ಎಮ್. ಪೆರ್ನಾಲ್ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ನಲಂದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ, ಕವಿ ಮೆಲ್ವಿನ್ ರೊಡ್ರಿಗಸ್, ಅಖಿಲ ಭಾರತ ಕೊಂಕಣಿ ಪರಿಷದ್ ಇದರ ಕಾರ್ಯಧ್ಯಕ್ಷ ಚೇತನ್ ಆಚಾರ್ಯ ಮತ್ತು ಕೊಂಕಣಿ ಶಿಕ್ಷಣ ತಜ್ಞ ಡಾ| ಕಸ್ತೂರಿ ಮೋಹನ್ ಪೈ ಇವರ ಮಾರ್ಗದರ್ಶನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉಪಸಮಿತಿಗಳನ್ನು ರಚಿಸಲಾಗಿದ್ದು, ಆರ್ಥಿಕ ಸಮಿತಿಗೆ ಸ್ಟೀಫನ್ ಪಿಂಟೊ, ಬೆಂದೂರ್ ಮತ್ತು ಓಸ್ವಲ್ಡ್ ರೊಡ್ರಿಗಸ್, ಬಿಜೈ, ಊಟೋಪಚಾರ ಸಮಿತಿಗೆ ವಿಶ್ವ ಕೊಂಕಣಿ ಕೇಂದ್ರ, ವಸತಿ ಸಮಿತಿಗೆ ವಿನ್ಸೆಂಟ್ ಪಿಂಟೊ, ಫ್ಲೊಯ್ಡ್ ಕಿರಣ್ ಮತ್ತು ಜೆರಿ ಕೊನ್ಸೆಸೊ, ನೋಂದಣಿ ಮತ್ತು ಸ್ವಯಂ ಸೇವಕ ಸಮಿತಿಗೆ ಶ್ರೀಮತಿ ಸುಚಿತ್ರಾ ಶೆಣೈ ಮತ್ತು ಶ್ರೀಮತಿ ಫೆಲ್ಸಿ ಲೋಬೊ, ಕಾರ್ಯಕ್ರಮ ಸಮಿತಿಗೆ ಡಾ| ಹನುಮಂತ್ ಚೋಪ್ಡೆಕರ್ ಮತ್ತು ಡಾ| ಜಯಂತಿ ನಾಯ್ಕ್, ವೇದಿಕೆ ನಿರ್ವಹಣಾ ಸಮಿತಿಗೆ ಅನ್ವೇಷಾ ಸಿಂಘಬಾಳ್, ಮಾಧ್ಯಮ ಸಮಿತಿಗೆ ಸ್ಟ್ಯಾನಿ ಬೇಳಾ ಮತ್ತು ಪ್ರವೀಣ್ ತಾವ್ರೊ , ಮುದ್ರಣ – ಸ್ಮರಣ ಸಂಚಿಕೆ ಸಮಿತಿಗೆ ಟೈಟಸ್ ನೊರೊನ್ಹಾ – ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post