ಮಂಗಳೂರು, ಅ.16: ನಗರದ ಪುರಭವನದ ಬಳಿ ಹಲವು ವರ್ಷಗಳಿಂದ ನಡೆಯುತ್ತಿದ್ದ ರವಿವಾರ ರಜಾ ದಿನದ ವ್ಯಾಪಾರ (ಸಂಡೆ ಬಜಾರ್) ವನ್ನು ಮಂಗಳೂರು ಮಹಾನಗರ ಪಾಲಿಕೆಯು ಕಳೆದ 5 ತಿಂಗಳಿನಿಂದ ಸಾರ್ವಜನಿಕ ದೂರಿನ ಮೇರೆಗೆ ನಿರಂತರ ದಾಳಿ ನಡೆಸಿ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗುತ್ತಿತ್ತು. ಇದೀಗ ಮಂಗಳೂರು ಮಹಾನಗರ ಪಾಲಿಕೆಯು ನಗರದ ರೋಸಾರಿಯೋ ರಸ್ತೆಯಲ್ಲಿ 95 ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ನಮ್ಮ ಹೋರಾಟಕ್ಕೆ ನ್ಯಾಯ ಒದಗಿಸಿದೆ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು)ಹೇಳಿಕೆಯಲ್ಲಿ ತಿಳಿಸಿದೆ.
ಪಾಲಿಕೆಯ ದಾಳಿಯ ಮಧ್ಯೆಯೂ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ವ್ಯಾಪಾರಕ್ಕೆ ಅವಕಾಶ ನೀಡುವಂತೆ ವ್ಯಾಪಾರಿಗಳು ಸಿಐಟಿಯು ನೇತೃತ್ವದಲ್ಲಿ ನಿರಂತರ ಹೋರಾಟ ನಡೆಯುತ್ತಿತ್ತು. ಬೀದಿಬದಿ ವ್ಯಾಪಾರಿಗಳ ಸಂಘದ ಮುಖಂಡ ಬಿ.ಕೆ ಇಮ್ತಿಯಾಝ್ ಮೇಲೆ ಪೊಲೀಸರು ದಾಖಲಿಸಿದ್ದ ಎಫ್ಐಆರ್ಗೆ ಕರ್ನಾಟಕ ಹೈ ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕೂಡ ಸಂಡೆ ಬಜಾರ್ ವ್ಯಾಪಾರಕ್ಕೆ ಅವಕಾಶ ನಿರಾಕರಿಸ ದಂತೆ ನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರು.ನಿರಂತರ ಹೋರಾಟದ ಫಲವಾಗಿ ನಗರಪಾಲಿಕೆಯು ಶುಕ್ರವಾರ ನಡೆದ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ ಸಭೆಯಲ್ಲಿ ಸಂಡೆ ಬಜಾರ್ ವ್ಯಾಪಾರಕ್ಕೆ ಸ್ಟೇಟ್ಬ್ಯಾಂಕ್ ಸಮೀಪದ ರೋಸಾರಿಯೋ ರಸ್ತೆಯಲ್ಲಿ ಅನುಮೋದನೆ ನೀಡಿತು.
ಸಂತೆ ಬಜಾರ್ ಪ್ರತಿಯೊಂದು ನಗರಕ್ಕೆ ಮೆರುಗು ನೀಡುತ್ತದೆ. ರಜಾದಿನದ ವ್ಯಾಪಾರ ಮಂಗಳೂರಿನ ಬಡ ಮತ್ತು ಕೆಳ ಮಧ್ಯಮ ವರ್ಗದ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ. ಸಂಘಟನೆಯ ಸುದೀರ್ಘ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಜನರ ಬದುಕುವ ಹಕ್ಕನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ವ್ಯಾಪಾರಿಗಳ ಹೋರಾಟಗಾರರ ಭಾವನೆಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪಾಲಿಕೆಯ ಆಯುಕ್ತ ರಾಹುಲ್ ರತ್ನಮ್ ಪಾಂಡೆ ಧನ್ಯವಾದಗಳು ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ತಿಳಿಸಿದ್ದಾರೆ.
ಸುಳ್ಳು ಆರೋಪ, ಸುಪ್ರೀಂ ಕೋರ್ಟ್ ಆದೇಶದ ತಪ್ಪುವ್ಯಾಖ್ಯಾನ ಮಾಡಿ ಐದು ತಿಂಗಳಿನಿಂದ ಸಂಡೆ ಬಜಾರ್ ವ್ಯಾಪಾರಿಗಳ ಮೇಲೆ ನಗರಪಾಲಿಕೆ ನಿರಂತರ ದಬ್ಬಾಳಿಕೆ ನಡೆಸಿತು. ನಮ್ಮ ಹೋರಾಟದ ಫಲವಾಗಿ ಇಂದು ನಗರಪಾಲಿಕೆ ಪಟ್ಟಣ ವ್ಯಾಪಾರ ಸಮಿತಿ ಅನುಮೋದನೆ ನೀಡಿದೆ. ಪಾಲಿಕೆ ಇನ್ನಾದರೂ ಬೀದಿ ವ್ಯಾಪಾರಿಗಳ ಜೀವನ ಸಂರಕ್ಷಣೆ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಲಿ ಎಂದು ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post