ಮಂಗಳೂರು: ಮೈಸೂರಿನ ದಸರಾ ರಾಜವೈಭವದ ಪ್ರತೀಕವಾದರೆ, ಮಂಗಳೂರಿನ ದಸರಾ ಭಕ್ತವೈಭವದ ಪ್ರತೀಕ. ದಸರಾ ಕೇವಲ ಆಚರಣೆಯಲ್ಲ; ಅದು ನಮ್ಮ ಪರಂಪರೆಯ ಹೆಮ್ಮೆ, ಆರ್ಥಿಕ ಚಟುವಟಿಕೆಗಳ ಚೈತನ್ಯ ಮತ್ತು ಸಮಾಜದ ಒಗ್ಗಟ್ಟಿನ ಸಂಕೇತ” ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣ್ಣಿಸಿದರು.
“ಕುದ್ರೋಳಿ ಕ್ಷೇತ್ರಕ್ಕೆ ಕೇವಲ ದಸರಾ ಉದ್ಘಾಟನೆಗಾಗಿ ಬಂದಿಲ್ಲ. ಭಕ್ತನಾಗಿಯೂ ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಉಡುಪಿಯಲ್ಲಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದ ಬಳಿಕ ಇಲ್ಲಿ ಗೋಕರ್ಣನಾಥ ಸ್ವಾಮಿ, ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ನಾರಾಯಣ ಗುರುಗಳ ಆಶೀರ್ವಾದ ಕೋರಿದ್ದೇನೆ” ಎಂದರು.

ದಸರಾ ಸೌಹಾರ್ದತೆ, ಮಾನವೀಯತೆಯ ಸಂಕೇತ ; “ಮಂಗಳೂರು ದಸರಾ ಸಂಭ್ರಮ, ಸೌಹಾರ್ದತೆ, ಸಂಸ್ಕೃತಿ ಮತ್ತು ಮಾನವೀಯತೆಯ ಸಂಗಮವಾಗಿದೆ. ದೇವಸ್ಥಾನಗಳಲ್ಲಿ ಪಕ್ಷಭೇದಗಳಿಗೆ ಅವಕಾಶವಿಲ್ಲ. ಎಲ್ಲರೂ ಒಂದಾಗಿ ಸೇರುವ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತವೆ. ಪರಂಪರೆಯ ಜತೆಗೆ ಪ್ರಗತಿಯನ್ನೂ ಸಾಧಿಸಬೇಕು” ಎಂದು ಹೇಳಿದರು.
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ಮಂಗಳೂರು ದಸರಾ ಮಹೋತ್ಸವದಲ್ಲಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು. ಕರಾವಳಿಯ ಸಂಸ್ಕೃತಿ, ಧಾರ್ಮಿಕ ಪರಂಪರೆ, ಪ್ರಕೃತಿ ಮತ್ತು ಜನರ ಭಾವನೆಗಳನ್ನು ಗೌರವಿಸಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ” ಎಂದು ಹೇಳಿದರು.

ತುಳು ಭಾಷೆಗೆ ಗೌರವ; “ತುಳುನಾಡಿನ ಸ್ನೇಹಿತರು, ಶಾಸಕರು ಪಕ್ಷಭೇದ ಮರೆತು ಬಂದು ತಮ್ಮ ಭಾಷೆಗೆ ಗೌರವ ನೀಡುವಂತೆ ಮನವಿ ಮಾಡಿದ್ದರು. ಇದು ಕೇವಲ ಭಾಷೆಯ ವಿಚಾರವಲ್ಲ, ಜನರ ಭಾವನೆ, ಬದುಕು, ಪರಂಪರೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಿಷಯ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದು ಸಚಿವ ಸಂಪುಟ ಸಭೆ ನಡೆಸಿ ತುಳು ಭಾಷೆಗೆ ಗೌರವ ನೀಡುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ. ಇದರಿಂದ ನನಗೆ ಅಪಾರ ಸಂತೋಷವಾಗಿದೆ” ಎಂದು ಹೇಳಿದರು.
“ತಾಯಿಯಿಂದ ಕಲಿತ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಭಾಷೆಯ ಗೌರವ ಕಾಪಾಡುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು” ಎಂದರು.
ಜನಾರ್ದನ ಪೂಜಾರಿ ಕೊಡುಗೆ ; 1985ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೆ. ಬಳಿಕ ಜನಾರ್ದನ ಪೂಜಾರಿ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಕನಕಪುರದಲ್ಲಿ ಸಾಲಮೇಳ ನಡೆಸಿ ಬಡವರಿಗೆ ಸಾಲ ನೀಡಿದ್ದರು. ಅಂದು ಸುಮಾರು 5,000 ರೂ. ಸಾಲವೂ ದೊಡ್ಡ ಮೊತ್ತವಾಗಿತ್ತು. ನನ್ನ ಕ್ಷೇತ್ರದಲ್ಲಿ ಏಳರಿಂದ ಎಂಟು ಸಾವಿರ ಜನರಿಗೆ ನೆರವು ದೊರೆತಿತ್ತು. ಆ ನೆರವು ನನ್ನ ಮುಂದಿನ ರಾಜಕೀಯ ಬದುಕಿಗೆ ದೊಡ್ಡ ಶಕ್ತಿ ನೀಡಿತು. ಬಳಿಕ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ, ಶಾಸಕನಾಗಿ, ಸಚಿವನಾಗಿ ಬೆಳೆದು ಇಂದು ಈ ಸ್ಥಾನಕ್ಕೆ ಬರಲು ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದವೂ ಕಾರಣ” ಎಂದು ಹೇಳಿದರು.
“ನಾರಾಯಣ ಗುರುಗಳ ಸಂದೇಶ ಹಾಗೂ ಜನಾರ್ದನ ಪೂಜಾರಿ ಅವರ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಯುವಜನರಿಗೆ ಅವಕಾಶ ಕಲ್ಪಿಸುವುದು ಮತ್ತು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಬೆಳೆಸುವುದು ಮುಖ್ಯ” ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post