ಮಂಗಳೂರು, ಅ.14: ಮಂಗಳೂರು ನಗರದ ಚರ್ಚ್ ಪಾದ್ರಿಯೊಬ್ಬರು 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯವರು ಮಂಗಳೂರು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಮಂಗಳೂರು ಧರ್ಮಪ್ರಾಂತಕ್ಕೆ ಸೇರಿದ ಪಾದ್ರಿಯೊಬ್ಬರು ಚರ್ಚಿನಲ್ಲಿ ಪೂಜಾ ವಿಧಿಗಳಿಗೆ ಸಹಕರಿಸುತ್ತಿದ್ದ ಅಪ್ರಾಪ್ತ ಬಾಲಕರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ್ದಾರೆಂದು ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸ್ವತಃ ಸಂತ್ರಸ್ತರು ಮಂಗಳೂರು ಬಿಷಪರಿಗೂ ದೂರು ನೀಡಿದ್ದಾರೆಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟಾನ್ಲೀ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಿಷಪ್ ಪೀಟರ್ ಪೌಲ್ ಸಲ್ದಾನ ಅವರಿಗೆ ಪೋಷಕರು ಲಿಖಿತ ದೂರು ನೀಡಿದ್ದು, ಇದಾಗಿ ಎರಡು ತಿಂಗಳು ಕಳೆದಿದೆ. ಬಿಷಪರು ದೂರಿನ ಬಗ್ಗೆ ವ್ಯಾಟಿಕನ್ನಲ್ಲಿರುವ ಪೋಪ್ ಗಮನಕ್ಕೆ ತಂದು ಕ್ರಮ ಜರುಗಿಸುತ್ತೇನೆಂದು ಹೇಳಿ ಪೋಷಕರನ್ನು ಕಳುಹಿಸಿದ್ದಾರೆ. ಆದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪೋಕ್ಸೋ ಕಾಯ್ದೆಯಡಿ ಬರುವುದರಿಂದ ಈ ರೀತಿಯ ಪ್ರಕರಣಗಳನ್ನು ಪೊಲೀಸರ ಗಮನಕ್ಕೆ ತರದೆ ಮುಚ್ಚಿಡುವುದು ಅಪರಾಧವಾಗಿದ್ದು, ಬಿಷಪ್ ಅವರ ಮೇಲೂ ಕೇಸು ದಾಖಲಿಸಬೇಕೆಂದು ಸ್ಟಾನ್ಲೀ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Discover more from Coastal Times Kannada
Subscribe to get the latest posts sent to your email.







Discussion about this post