ಬೆಳ್ತಂಗಡಿ: ನಾವೂರು ಗ್ರಾಮದಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನಾವೂರು ನಿವಾಸಿಗಳಾದ ರವಿ ಪೂಜಾರಿ(31), ನಿವಾಸಿ ಸುರೇಶ್ ಇಂಚರ (44) ಹಾಗೂ ದಿನೇಶ್ ಪ್ರಭು (51) ಎಂದು ಗುರುತಿಸಲಾಗಿದೆ.
ಅ.7ರಂದು ನಾವೂರು ಪೇಟೆಯಲ್ಲಿರುವ ಸ್ವಾತಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ತಡ ರಾತ್ರಿ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯಲ್ಲಿ, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು, ಅಂದಾಜು 2 ಲಕ್ಷದಿಂದ 3 ಲಕ್ಷ ರೂ. ಮೌಲ್ಯದ ಇತರ ಆಸ್ತಿ ಬೆಂಕಿಗೆ ಆಹುತಿಯಾಗಿವೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 112/2026 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ರ ಸೆಕ್ಷನ್ 326(ಎಫ್), 326(ಜಿ) ಮತ್ತು 324(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಚುರುಕುಗೊಳಿಸಿದ ಬೆಳ್ತಂಗಡಿ ಪೊಲೀಸರು ಕೃತ್ಯ ನಡೆದ ಒಂದು ವಾರದಲ್ಲಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರು ಸೇರಿ ಬೆಂಕಿ ಹಾಕುವ ಸಂಚನ್ನು ರೂಪಿಸಿದ್ದು ರವಿ ಬೆಂಕಿ ಹಚ್ಚಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿರುವುದಾಗಿ ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಪ್ರಮುಖ ಆರೋಪಿ ರವಿಕುಮಾರ್ ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡಲಾಗಿದ್ದು ಇನ್ನಿಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವ ದಲ್ಲಿ ಪೊಲೀಸ್ ಉಪ ನೀರಿಕ್ಷಕರಾದ ಆನಂದ್ ಹಾಗೂ ಸಿಖಂದರ್ ಪಾಷಾ ತಂಡ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post