ಉಳ್ಳಾಲ: ಚೆಂಬುಗುಡ್ಡೆ ಹಿಂದೂ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇಸ್ಫೊಸಿಸ್ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಚಿತಾಗಾರವನ್ನು ಶೀಘ್ರವೇ ಉಳ್ಳಾಲ ನಗರಸಭೆಗೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ.
ಸುಮಾರು ₹ 1.80 ಕೋಟಿ ವೆಚ್ಚದಲ್ಲಿ 3,000 ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣವಾದ ಕಟ್ಟಡದೊಳಗೆ ಕ್ರಿಮೆಟೋರಿಯಂ ಬಹುಭಾಗವನ್ನು ಹೊಂದಿದ್ದು, ಉಳಿದ ಸ್ಥಳದಲ್ಲಿ ಎಲೆಕ್ಟ್ರಿಕಲ್ ಕೊಠಡಿ, ಕಚೇರಿ, ಶೌಚಾಲಯವನ್ನು ನಿರ್ಮಿಸಲಾಗಿದೆ. 2021ರ ಜು.12 ರಂದು ವಿದ್ಯುತ್ ಚಿತಾಗಾರದ ಶಿಲಾನ್ಯಾಸವನ್ನು ಜಿಲ್ಲಾಡಳಿತ ನೆರವೇರಿಸಿತ್ತು.
ನ.30ರಂದೇ ಚಿತಾಗಾರದ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ವಿದ್ಯುತ್ ಸಂಪರ್ಕದ ವ್ಯವಸ್ಥೆಯಾಗದೆ ಹಿನ್ನೆಡೆಯಾಗಿತ್ತು. ಇದೀಗ ವಿದ್ಯುತ್ ಸಂಪರ್ಕವೂ ಚಿತಾಗಾರಕ್ಕೆ ದೊರೆತಿದೆ. ಇಸ್ಫೊಸಿಸ್ ಸಂಸ್ಥೆಯ ಕಾಮಗಾರಿ ಕೈಗೊಳ್ಳುವ ಐಆರ್ ಡಬ್ಲ್ಯು ಕನ್‌ಸ್ಟ್ರಕ್ಷನ್ಸ್ ಕಂಪನಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದೆ.
ವಿದ್ಯುತ್ ಚಿತಾಗಾರದ ಅಳವಡಿಕೆಯನ್ನು ಬೆಂಗಳೂರಿನ ಪ್ರಭಾಕರ್ ಮಾಡಿದ್ದಾರೆ. ಮಂಗಳೂರಿನ ಬೋಳೂರಿನಲ್ಲಿಯೂ ಪ್ರಭಾಕರ್ ಅವರ ನಿರ್ದೇಶನದಂತೆ ವಿದ್ಯುತ್ ಚಿತಾಗಾರವನ್ನು ಅಳವಡಿಸಲಾಗಿದೆ. 42 ಕಿಲೋ ವ್ಯಾಟ್ ವಿದ್ಯುತ್ ಸಾಮರ್ಥ್ಯವನ್ನು ಚಿತಾಗಾರಕ್ಕೆ ಅಳವಡಿಸಲಾಗಿದ್ದು, ಒಂದು ಹೆಣ ಸುಡಲು ₹ 400 ವಿದ್ಯುತ್ ಖರ್ಚಾಗಲಿದೆ. ಮುಂದಿನ ದಿನಗಳಲ್ಲಿ ಉಳ್ಳಾಲ ನಗರಸಭೆಗೆ ವಿದ್ಯುತ್ ಚಿತಾಗಾರವನ್ನು ಹಸ್ತಾಂತರಿಸಿದ ಬಳಿಕ ಸ್ಮಶಾನದಲ್ಲಿ ಒಬ್ಬ ಆಪರೇಟರ್ ಅನ್ನು ನಗರಸಭೆ ನೀಡಬೇಕಾಗಿದ್ದು, ಸಂಪೂರ್ಣ ಚಿತಾಗಾರದ ನಿರ್ವಹಣೆಯನ್ನು ನೋಡಬೇಕಾಗಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ಚೆಂಬುಗುಡ್ಡೆ ಹಿಂದೂ ಸ್ಮಶಾನ ಐವತ್ತು ವರ್ಷಕ್ಕಿಂತಲೂ ಹಳೆಯದಾಗಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿರುವ ಈ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಜಿಲ್ಲಾಡಳಿತ ಒಪ್ಪಿಗೆ ನೀಡಿದ ಎಂಟು ತಿಂಗಳುಗಳಲ್ಲಿ ವಿದ್ಯುತ್ ಚಿತಾಗಾರ ಚೆಂಬುಗುಡ್ಡೆಯಲ್ಲಿ ನಿರ್ಮಾಣವಾಗಿದೆ.
ಈ ನಡುವೆ 10 ವರ್ಷಗಳಿಂದ ಈಚೆಗೆ ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಸ್ಮಶಾನದ ಸುತ್ತಮುತ್ತ ಮನೆಗಳ ಶಾಲಾ ಕಾಲೇಜುಗಳು ತಲೆ ಎತ್ತಿದ್ದು, ವಾಯುಮಾಲಿನ್ಯವೂ ಇಲ್ಲಿನ ಜನರಿಗೆ ಸಮಸ್ಯೆಯಾಗುತ್ತಿದೆ. ಇನ್ನೊಂದೆಡೆ ಈ ಸ್ಮಶಾನದಲ್ಲಿ ಸಾವಿರಗಟ್ಟಲೆ ಕ್ವಿಂಟಲ್ ಲೆಕ್ಕದಲ್ಲಿ ಕಟ್ಟಿಗೆಯೂ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆ ಇಡಲಾಗಿತ್ತು.
ಸ್ಮಶಾನ ನಿರ್ವಹಣಾ ಸಮಿತಿಯ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಪದಾಧಿಕಾರಿಗಳಾದ ಈಶ್ವರ್ ಉಳ್ಳಾಲ್, ಸುರೇಶ್ ಭಟ್ ನಗರ, ವಿಠಲ ಶ್ರೀಯಾನ್, ರಾಜೀವ ಮೆಂಡನ್, ರಮೇಶ್ ಮೆಂಡನ್, ಭಾಸ್ಕರ ಶೆಟ್ಟಿ, ಸುಂದರ ಅಮೀನ್, ಶೇಖರ್ ಚೊಂಬುಗುಡ್ಡೆ, ಸ್ಥಳೀಯ ನಗರಸಭೆ ಸದಸ್ಯರಾದ ಶಶಿಕಲಾ ಹಾಗೂ ಬಾಝಿಲ್ ಡಿಸೋಜ ಏಳು ತಿಂಗಳ ಹಿಂದೆ ಕ್ಷೇತ್ರದ ಶಾಸಕ ಯು.ಟಿ.ಖಾದರ್ ರವರಿಗೆ ಮನವಿಯನ್ನು ಸಲ್ಲಿಸಿದ್ದರು. ಸಮಿತಿಯ ಮನವಿಯನ್ನು ಶಾಸಕರು ಜಿಲ್ಲಾಧಿಕಾರಿಗೆ ನೀಡಿದ್ದು, ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಂಬಂಧಿಸಿದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದರು.