ನವದೆಹಲಿ : ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಎರಡನೇ ಬಾರಿಗೆ ಅಹಿಂದ ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿದ್ದಾರೆ.
ಕಳೆದ ರಾತ್ರಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರ ಜೊತೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬಂದು ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿ ಎಂದು ಮಲ್ಲಿಕಾರ್ಜುನ ಖರ್ಗೆಯವರು ತೀರ್ಮಾನಿಸಿದರು. ಪಟ್ಟು ಬಿಡದೆ ಹಠ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಹ ಹೈಕಮಾಂಡ್ ತೀರ್ಮಾನಕ್ಕೆ ಒಪ್ಪಿಕೊಂಡಿದ್ದಾರೆ.
ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಗೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಅಧಿಕಾರ ನಡೆಸಲಿದ್ದಾರೆ. ನಂತರದ ಅವಧಿಗೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಅಧಿಕಾರ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಒಮ್ಮತಕ್ಕೆ ಬರುವ ಸಲುವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾ ಭವನದಲ್ಲಿ ಸಂಜೆ 7 ಗಂಟೆಗೆ ಸಭೆ ನಡೆಯುತ್ತಿದ್ದು, ನೂತನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಜರಿರಬೇಕಾಗಿ ಸೂಚಿಸಿದ್ದಾರೆ.
ಎರಡೂವರೆ ವರ್ಷಗಳ ಬಳಿಕ ಅಧಿಕಾರ ಬಿಟ್ಟುಕೊಡುವ ವಾಗ್ದಾನವನ್ನು ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಡಬೇಕು ಎಂಬುದು ಡಿ.ಕೆ ಶಿವಕುಮಾರ್ ಅವರ ಷರತ್ತು ಎಂದು ಮೂಲಗಳು ಹೇಳಿವೆ.
Discover more from Coastal Times Kannada
Subscribe to get the latest posts sent to your email.
Discussion about this post