ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸೆನೆಗಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಫಿಫಾ ವಿಶ್ವಕಪ್ 23ನೇ ಆವೃತ್ತಿಯಲ್ಲಿ ಫ್ರಾನ್ಸ್ ತಂಡ ಶುಭಾರಂಭ ಮಾಡಿದೆ. ನಾಯಕ ಕೈಲಿಯನ್ ಎಂಬಪ್ಪೆ ಎರಡು ಗೋಲುಗಳನ್ನು ಗಳಿಸಿ ಫ್ರೆಂಚ್ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ, ಎಂಬಪ್ಪೆ ಫ್ರಾನ್ಸ್ ಪರ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ.
ಪಂದ್ಯ ಹೈಲೈಟ್ಸ್: ಪಂದ್ಯದ ಮೊದಲಾರ್ಧದಲ್ಲಿ ಸೆನೆಗಲ್ ಆಕ್ರಮಣಕಾರಿ ಪ್ರದರ್ಶನ ನೀಡಿತು ಆದರೆ ಗೋಲು ಗಳಿಸುವಲ್ಲಿ ವಿಫಲವಾಯಿತು. ಆದಾಗ್ಯೂ, ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಎಂಬಪ್ಪೆ 66ನೇ ನಿಮಿಷದಲ್ಲಿ ಫ್ರಾನ್ಸ್ ಪರ ಮೊದಲ ಗೋಲು ಗಳಿಸಿದರು. ಔಸ್ಮಾನೆ ಡೆಂಬೆಲೆ ಬದಲಿಗೆ ಬಂದ ಬ್ರಾಡ್ಲಿ ಬಾರ್ಕೋಲಾ 82ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ 2-0 ಫ್ರಾನ್ಸ್ಗೆ ಮುನ್ನಡೆ ತಂದುಕೊಟ್ಟುರು.

ಪಂದ್ಯ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಸೆನೆಗಲ್ 90ನೇ ನಿಮಿಷದಲ್ಲಿ 18 ವರ್ಷದ ಇಬ್ರಾಹಿಂ ಮೂಲಕ ಗೋಲಿನ ಖಾತೆ ತೆರೆಯಿತು. ಇದರೊಂದಿಗೆ ಇಬ್ರಾಹಿಂ ವಿಶ್ವಕಪ್ ಇತಿಹಾಸದಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಫ್ರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಇದಾದ ಮುಂದಿನ ನಿಮಿಷದಲ್ಲಿ (95ನೇ ನಿಮಿಷ), ಎಂಬಪ್ಪೆ 30 ಗಜ ದೂರದಿಂದ ಚೆಂಡನ್ನು ಗೋಲಿಗಟ್ಟಿ 3-1 ರೊಂದಿಗೆ ಪಂದ್ಯವನ್ನು ಮುಗಿಸಿದರು.
ಇದರೊಂದಿಗೆ ಫ್ರಾನ್ಸ್ ತಂಡ 2002ರ ಸೋಲಿಗೆ ಸೇಡು ತೀರಿಸಿಕೊಂಡಿತು. ಅಂದು ವಿಶ್ವಕಪ್ ನ ಕಿಕ್-ಆಫ್ ಪಂದ್ಯದಲ್ಲಿ ಸೆನೆಗಲ್ ತಂಡವು ಆಗಿನ ವಿಶ್ವ ಚಾಂಪಿಯನ್ ಫ್ರಾನ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತ್ತು. ಇದರಿಂದಾಗಿ ಫ್ರಾನ್ಸ್ ಗ್ರೂಪ್ ಹಂತದಿಂದಲೇ ಹೊರಬಿತ್ತು. ಈ ಬಾರಿ ಫ್ರಾನ್ಸ್ ಸೆನೆಗಲ್ಗೆ ಅಂತಹ ಅವಕಾಶ ನೀಡಲಿಲ್ಲ. ಏತನ್ಮಧ್ಯೆ ಈ ಪಂದ್ಯದಲ್ಲಿ ಎರಡು ಗೋಲುಗಳೊಂದಿಗೆ, ಎಂಬಪ್ಪೆ ಫ್ರಾನ್ಸ್ ಪರ ಸಾರ್ವಕಾಲಿಕ ದಾಖಲೆ ಬರೆದರು. ವಿಶ್ವಕಪ್‌ನಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಹೊಸ ದಾಖಲೆ ಬರೆದ ಎಂಬಾಪೆ : ಪಂದ್ಯದಲ್ಲಿ ಎರಡನೇ ಗೋಲು ಗಳಿಸುವ ಮೂಲಕ ಎಂಬಪ್ಪೆ ಇತಿಹಾಸ ನಿರ್ಮಿಸಿದರು. ಅವರು ತಮ್ಮ ಅದ್ಭುತ ವೃತ್ತಿಜೀವನಕ್ಕೆ ಮತ್ತೊಂದು ಪ್ರಮುಖ ಸಾಧನೆಯನ್ನು ಸೇರಿಸಿದರು. ಈಗ ಫ್ರಾನ್ಸ್ ಪರ 58 ಗೋಲುಗಳನ್ನು ಗಳಿಸಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದರೊಂದಿಗೆ 57 ಗೋಲುಗಳ ಆಲಿವಿಯರ್ ಗಿರೌಡ್ ಅವರನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ಅವರ ವಿಶ್ವಕಪ್‌ನಲ್ಲಿ ಗೋಲುಗಳ ಸಂಖ್ಯೆ ಈಗ 14ಕ್ಕೆ ತಲುಪಿದ್ದು, ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಬ್ರೆಜಿಲ್‌ನ ಮಾಜಿ ಪ್ಲೇಯರ್ ರೊನಾಲ್ಡೊ (15) ಮತ್ತು ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಮತ್ತು ಅರ್ಜೆಂಟಿನಾದ ಲಿಯೊನೆಲ್ ಮೆಸ್ಸಿ (16) ಮಾತ್ರ ಅವರಿಗಿಂತ ಹೆಚ್ಚು ಗೋಲುಗಳನ್ನು ಗಳಿಸಿ ವಿಶ್ವಕಪ್‌ನಲ್ಲಿ ಮುಂದಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post