ಮಂಗಳೂರು: ಕಠಿಣ ಯೋಗಾಸನಗಳಲ್ಲಿ ಒಂದಾದ ಸರ್ವಾಂಗಾಸನವನ್ನು ನಿರಂತರವಾಗಿ 32 ನಿಮಿಷಗಳ ಕಾಲ ಮಾಡುವ ಮೂಲಕ ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್‌ನ ತೃತೀಯ ವರ್ಷದ ಬಿಎನ್‌ವೈಎಸ್ ವಿದ್ಯಾರ್ಥಿ ಪಿ.ಕೆ. ವಿಕಾಸ್ ಅವರು ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಿಂದ ವಿಶ್ವ ದಾಖಲೆಯ ಮಾನ್ಯತೆ ಪಡೆದುಕೊಂಡಿದ್ದಾರೆ. ತಮ್ಮ ಅದ್ಭುತ ಸಮತೋಲನ, ಏಕಾಗ್ರತೆ ಹಾಗೂ ದೈಹಿಕ ಸಾಮರ್ಥ್ಯದ ಮೂಲಕ ಈ ಯುವ ಪ್ರತಿಭೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಪರಂದಗುತ್ತು ನಿವಾಸಿಯಾದ ವಿಕಾಸ್, ಪಿ. ಅವರು ಕೃಷ್ಣಪ್ಪ ಪೂಜಾರಿ ಹಾಗೂ ಶೀಲಾ ಎಸ್. ದಂಪತಿಯ ಪುತ್ರ. ಪ್ರಸ್ತುತ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ ತೃತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.
ಇಂದ್ರಪ್ರಸ್ಥ ಶಾಲೆಯಲ್ಲಿ 5ನೇ ತರಗತಿಯಲ್ಲಿದ್ದಾಗಲೇ ಯೋಗಾಭ್ಯಾಸ ಆರಂಭಿಸಿದ್ದ ವಿಕಾಸ್, ಕಳೆದ 11 ವರ್ಷಗಳಿಂದ ನಿರಂತರ ಸಾಧನೆ ಮಾಡುತ್ತಿದ್ದಾರೆ. ಎಸ್‌ಜಿಎಫ್‌ಐ ಸ್ಪರ್ಧೆಗಳು ಸೇರಿದಂತೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಶಾಲೆ ಹಾಗೂ ಕಾಲೇಜನ್ನು ಪ್ರತಿನಿಧಿಸಿದ್ದಾರೆ.

32 ನಿಮಿಷಗಳ ಕಾಲ ನಿರಂತರ ಸರ್ವಾಂಗಾಸನ ಪ್ರದರ್ಶನ: ಈ ಹಿಂದೆ ಸರ್ವಾಂಗಾಸನದಲ್ಲಿ 10 ನಿಮಿಷಗಳ ದಾಖಲೆ ಇತ್ತು. ಇದನ್ನು ಮುರಿಯುವ ಸಂಕಲ್ಪದೊಂದಿಗೆ ವಿಕಾಸ್ ಅವರು ನಿರಂತರ ಒಂದರಿಂದ ಒಂದೂವರೆ ತಿಂಗಳು ಕಠಿಣ ಅಭ್ಯಾಸ ನಡೆಸಿ, ಬರೋಬ್ಬರಿ 32 ನಿಮಿಷಗಳ ಕಾಲ ಸ್ಥಿರವಾಗಿ ಸರ್ವಾಂಗಾಸನ ನಿರ್ವಹಿಸಿದ ವಿಡಿಯೋಗ್ರಫಿ ದಾಖಲೆಯನ್ನು ಬಿಡಬ್ಲ್ಯುಆರ್ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದರು.
2026ರ ಸೆಪ್ಟಂಬರ್ 17ರಂದು ಈ ವಿಶ್ವ ದಾಖಲೆ ಅಧಿಕೃತವಾಗಿ ಅನುಮೋದನೆಗೊಂಡಿದ್ದು (Record Title: Longest Continuous Hold in Sarvangasana (Shoulder Stand) – Individual), ಸಂಸ್ಥೆಯು ಪ್ರಮಾಣಪತ್ರ, ಪದಕ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿದೆ.

ಮುಂದಿನ ಗುರಿ: ಗೋಲ್ಡನ್ ಬುಕ್ ಮತ್ತು ಗಿನ್ನೆಸ್ ರೆಕಾರ್ಡ್ “ಸರ್ವಾಂಗಾಸನವನ್ನು ಆಸನಗಳ ರಾಣಿ ಎಂದು ಕರೆಯುತ್ತಾರೆ. ಮಲಗಿ ಕಾಲುಗಳನ್ನು ಮೇಲಕ್ಕೆತ್ತಿ ದೀರ್ಘಕಾಲ ದೇಹ ಭಾರವನ್ನು ಭುಜದ ಮೇಲೆ ಹಾಕಿ ಸಮತೋಲನದಲ್ಲಿಡುವುದು ಸವಾಲಿನ ಕೆಲಸ. ಮೆದುಳಿಗೆ ರಕ್ತಸಂಚಾರ ಹೆಚ್ಚುವುದರಿಂದ ತಲೆಸುತ್ತುವ ಸಾಧ್ಯತೆಯೂ ಇರುತ್ತದೆ. ಮುಂದಿನ ದಿನಗಳಲ್ಲಿ ಪದ್ಮ ಸರ್ವಾಂಗಾಸನದಲ್ಲಿ 48 ನಿಮಿಷಗಳ ಕಾಲ ನಿರಂತರ ಪ್ರದರ್ಶನ ನೀಡಿ ‘ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್’ ಹಾಗೂ ‘ಗಿನ್ನೆಸ್ ವಿಶ್ವ ದಾಖಲೆ’ ಬರೆಯುವ ಗುರಿ ಹೊಂದಿದ್ದೇನೆ” ಎಂದು ವಿಕಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post