ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳಣ್ಣ ಗುಡ್ಡದ ಬಳಿ ಸುಮಾರು 45 ವರ್ಷದ ಸಯ್ಯದ್ ಹಾಜಿ ಎಂಬಾತನ ಕೈ- ಕಾಲು ಕಟ್ಟಿ ಮುಖವನ್ನ ಬಟ್ಟೆಯಿಂದ ಸುತ್ತಿ, ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಲಾಗಿದೆ. ಘಟನೆಯಲ್ಲಿ ಶೇ.60ರಿಂದ 70ರಷ್ಟು ಸುಟ್ಟ ಗಾಯಗಳಾಗಿರುವ ಆತನನ್ನ ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಯ್ಯದ್ ಹಾಜಿ ಪಾದರಾಯನಪುರದ ನಿವಾಸಿ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಳೆದ ಹತ್ತು ವರ್ಷಗಳಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿಂದಿ ಆಯ್ದುಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಆದರೆ, ಆತನ ಕುಟುಂಬಸ್ಥರ ಕುರಿತು ಈವರೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ವೈದ್ಯರ ಪ್ರಾಥಮಿಕ ಮಾಹಿತಿಯ ಪ್ರಕಾರ, ಗಾಯಾಳುವಿನ ದೇಹದ ಸುಮಾರು ಶೇ.60ರಿಂದ 70ರಷ್ಟು ಭಾಗ ಸುಟ್ಟುಹೋಗಿದೆ. ಆತನ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಆರಂಭದಲ್ಲಿ ಕೈ ಮತ್ತು ಕಾಲುಗಳಿಗೆ ಬೆಂಕಿ ತಗುಲಿದ್ದು, ಬೆಂಕಿ ಹೊತ್ತಿಕೊಂಡ ಸ್ಥಿತಿಯಲ್ಲೇ ಗುಡ್ಡದಿಂದ ಕೆಳಕ್ಕೆ ಓಡಿ ಬರುವ ಸಂದರ್ಭದಲ್ಲಿ ಎದೆಯ ಭಾಗಕ್ಕೂ ಬೆಂಕಿ ವ್ಯಾಪಿಸಿ ಗಂಭೀರ ಗಾಯಗಳಾಗಿವೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೆ.ವಂಶಿಕೃಷ್ಣ ಮಾಹಿತಿ ನೀಡಿದ್ದಾರೆ.
ಘಟನೆ ನಡೆದಿರುವ ಕುಳ್ಳಣ್ಣ ಗುಡ್ಡದ ಪ್ರದೇಶ ಖಾಸಗಿ ಸ್ವತ್ತಾಗಿದ್ದು, ಸುತ್ತಮುತ್ತ ಗಿಡಗಂಟಿ ಹಾಗೂ ಪೊದೆಗಳು ಬೆಳೆದಿವೆ. ರಾತ್ರಿ ಮತ್ತು ಬೆಳಗಿನ ಸಮಯದಲ್ಲಿ ಕೆಲ ಯುವಕರು ಇಲ್ಲಿಗೆ ಬಂದು ಮದ್ಯಪಾನ ಹಾಗೂ ಮಾದಕ ಪದಾರ್ಥಗಳ ಸೇವನೆಯಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.





Discussion about this post