ಬಂಟ್ವಾಳ: ಮಂಗಳೂರಿನ ಕಣ್ಣೂರಿನ ಸಿಮೆಂಟ್ ಮತ್ತು ಕಬ್ಬಿಣ ಮಾರಾಟ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಮಯ್ಯದಿ (40) ಅವರಿಂದ ತಲವಾರು ತೋರಿಸಿ ರೂ. 8.35 ಲಕ್ಷ ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ಶಕ್ತಿನಗರ ನಿವಾಸಿ ಪ್ರವಿತ್ ರಾಜ್ ಶೆಟ್ಟಿ, ಉಳ್ಳಾಲ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಮತ್ತು ಉಳ್ಳಾಲ ಹರೇಕಳ ನಿವಾಸಿ ಶಾಕೀರ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಕಣ್ಣೂರು ಎಂಬಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟದ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ ಎಂಬವರು ಆ.20ರಂದು ಮಧ್ಯಾಹ್ನ 1 ಗಂಟೆಗೆ ಸಂಸ್ಥೆಯ ವ್ಯವಹಾರದ ಹಣವನ್ನು ವಿವಿಧ ಅಂಗಡಿ ಗಳಿಂದ ಸಂಗ್ರಹಿಸಿಕೊಂಡು ಬಂಟ್ವಾಳ ಕಕ್ಕೆಪದವಿನಿಂದ ಪಾಣೆಮಂಗಳೂರಿಗೆ ಬೈಕ್ನಲ್ಲಿ ಬರುತ್ತಿರುವಾಗ ಬಂಟ್ವಾಳ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿ 2 ಬೈಕ್ಗಳಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ಮಯ್ಯದಿರವರಿಗೆ ತಲವಾರು ತೋರಿಸಿ, ಬೆದರಿಸಿ ಅವರ ಬಳಿಯಿದ್ದ ರೂ. 8,35,000 ನಗದು ಹಣವನ್ನು ದರೋಡೆಗೈದು ಪರಾರಿಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಮಂಗಳೂರು ಶಕ್ತಿನಗರ ನಿವಾಸಿ ಪ್ರವಿತ್ ಶೆಟ್ಟಿ, ಉಳ್ಳಾಲ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಮತ್ತು ಉಳ್ಳಾಲ ಹರೇಕಳ ನಿವಾಸಿ ಶಾಕೀರ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆರೋಪಿಗಳ ಪೈಕಿ ಪ್ರವಿತ್ ರಾಜ್ ಶೆಟ್ಟಿ ಎಂಬಾತನ ಗುರುತು ಪತ್ತೆ ಪರೇಡ್ ಕೂಡ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕರಾದ ಸೀತಾರಾಮ ಪಿ ಮತ್ತು ತಂಡ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ನ. 16ರಂದು ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಈ ವೇಳೆ ಆರೋಪಿಗಳನ್ನು ವಿಚಾರಣೆ ನಡೆಸಿ ಆರೋಪಿಗಳಿಂದ ರೂ . 2,01,000 ನಗದನ್ನು ವಶಪಡಿಸಿಕೊಂಡಿದ್ದಾರೆ. ಮತ್ತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.






Discussion about this post