ಜಾಗತಿಕ ಸಿನಿಪ್ರಿಯರು ಕಳೆದ ಹಲವು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದ ‘ಜೇಮ್ಸ್ ಬಾಂಡ್’ ಸರಣಿಯ ಮುಂದಿನ ನಾಯಕ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಹಾಲಿವುಡ್ನ ಜನಪ್ರಿಯ ನಟ ರಾಬರ್ಟ್ ಪ್ಯಾಟಿನ್ಸನ್ ಅವರನ್ನು ವಿಶ್ವದ ಜನಪ್ರಿಯ ಗೂಢಚಾರಿಕೆ ‘ಏಜೆಂಟ್ 007’ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಈ ಪಾತ್ರ ಸಿಕ್ಕಿರುವುದನ್ನು ಪ್ಯಾಟಿನ್ಸನ್ ‘ಜೀವಮಾನದ ಗೌರವ’ ಎಂದು ಬಣ್ಣಿಸಿದ್ದಾರೆ. ‘ದಿ ಬ್ಯಾಟ್ಮ್ಯಾನ್’ ಮತ್ತು ‘ದಿ ಒಡಿಸ್ಸಿ’ಯಂತಹ ಚಿತ್ರಗಳಲ್ಲಿನ ತಮ್ಮ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಈ ನಟ, ಈಗ ಈ ಐಕಾನಿಕ್ (ಪ್ರತಿಷ್ಠಿತ) ಪಾತ್ರವನ್ನು ನಿರ್ವಹಿಸಲಿದ್ದಾರೆ.
ಡೇನಿಯಲ್ ಕ್ರೇಗ್ 2006ರ ‘ಕ್ಯಾಸಿನೊ ರಾಯಲ್’ ಚಿತ್ರದಲ್ಲಿ ಮೊದಲ ಬಾರಿಗೆ ಈ ರಹಸ್ಯ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ 2021ರಲ್ಲಿ ಬಿಡುಗಡೆಯಾದ ‘ನೋ ಟೈಮ್ ಟು ಡೈ’ ಚಿತ್ರದ ಮೂಲಕ ಅವರು ಈ ಪಾತ್ರಕ್ಕೆ ವಿದಾಯ ಹೇಳಿದರು. ಈ ಚಿತ್ರದಲ್ಲಿ, ಜಾಗತಿಕ ಬೆದರಿಕೆಯೊಂದನ್ನು ತಡೆಯುವ ಪ್ರಯತ್ನದಲ್ಲಿ ಬಾಂಡ್ ತನ್ನ ಪ್ರಾಣವನ್ನೇ ಅರ್ಪಿಸುವ ಮೂಲಕ ಅಂತಿಮ ತ್ಯಾಗವನ್ನು ಮಾಡುತ್ತಾರೆ.
‘ಇಯಾನ್ ಪ್ರೊಡಕ್ಷನ್ಸ್’ (Eon Productions) ನಿರ್ಮಿಸಿದ ಚಲನಚಿತ್ರ ಸರಣಿಯಲ್ಲಿ, ಈವರೆಗೂ ಆರು ಮಂದಿ ನಟರು ಜೇಮ್ಸ್ ಬಾಂಡ್ ಪಾತ್ರವನ್ನು ನಿರ್ವಹಿಸಿದ್ದಾರೆ.

1962ರಿಂದ 1971ರವರೆಗಿನ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಸೀನ್ ಕಾನರಿ ಈ ಐಕಾನಿಕ್ ಗೂಢಚಾರಿ ಪಾತ್ರವನ್ನು ನಿರ್ವಹಿಸಿದ ಮೊದಲ ನಟರಾದರು. ಅವರ ನಂತರ 1969ರಲ್ಲಿ ಜಾರ್ಜ್ ಲಾಜೆನ್ಬಿ ಈ ಪಾತ್ರವನ್ನು ನಿರ್ವಹಿಸಿದರು. ತದನಂತರ 1973ರಿಂದ 1985ರವರೆಗೆ ರೋಜರ್ ಮೂರ್ ಈ ಪಾತ್ರದಲ್ಲಿ ಕಾಣಿಸಿಕೊಂಡರು. 1987ರಿಂದ 1989ರ ನಡುವೆ ಟಿಮೋತಿ ಡಾಲ್ಟನ್ ಎರಡು ಚಿತ್ರಗಳಲ್ಲಿ ಈ ರಹಸ್ಯ ಏಜೆಂಟ್ ಪಾತ್ರವನ್ನು ನಿರ್ವಹಿಸಿದರು. ನಂತರ 1995ರಿಂದ 2002ರವರೆಗೆ ಪಿಯರ್ಸ್ ಬ್ರೋಸ್ನನ್ ನಾಲ್ಕು ಚಿತ್ರಗಳಲ್ಲಿ ನಟಿಸಿದರು. ಇತ್ತೀಚೆಗೆ ಡೇನಿಯಲ್ ಕ್ರೇಗ್ ಅವರು 2006ರಿಂದ 2021ರವರೆಗೆ ಐದು ಚಿತ್ರಗಳಲ್ಲಿ ‘007’ ಪಾತ್ರವನ್ನು ನಿರ್ವಹಿಸಿದ್ದರು.
‘ಕನಸಿನ ಪಾತ್ರ’ ಎಂದ ಪ್ಯಾಟಿನ್ಸನ್; ವರದಿಗಳ ಪ್ರಕಾರ, ಜೇಮ್ಸ್ ಬಾಂಡ್ ಪಾತ್ರಕ್ಕೆ ಆಯ್ಕೆಯಾಗಿರುವುದಕ್ಕೆ ರಾಬರ್ಟ್ ಪ್ಯಾಟಿನ್ಸನ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಸಿನಿಮಾ ಜಗತ್ತಿನ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲಿ ಜೇಮ್ಸ್ ಬಾಂಡ್ ಕೂಡ ಒಂದು. ಇಂತಹ ಮಹತ್ವದ ಪಾತ್ರದ ಜವಾಬ್ದಾರಿ ವಹಿಸಿಕೊಳ್ಳುವುದು ನನ್ನ ಪಾಲಿಗೆ ಜೀವಮಾನದ ದೊಡ್ಡ ಗೌರವ’ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಜೇಮ್ಸ್ ಬಾಂಡ್ ಪಾತ್ರದಲ್ಲಿ ಡ್ಯಾನಿಯಲ್ ಕ್ರೇಗ್ ಅಭಿನಯಿಸಿ ಮೋಡಿ ಮಾಡಿದ್ದರು. ಇದೀಗ ಡ್ಯಾನಿಯಲ್ ಕ್ರೇಗ್ ಬಳಿಕ ‘ಏಜೆಂಟ್ 007’ ಪಾತ್ರಕ್ಕೆ ರಾಬರ್ಟ್ ಪ್ಯಾಟಿನ್ಸನ್ ಆಯ್ಕೆಯಾಗಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಈ ಘೋಷಣೆಯೊಂದಿಗೆ ‘ಅಮೆಜಾನ್ ಎಂಜಿಎಂ ಸ್ಟುಡಿಯೋಸ್’ ಅಡಿಯಲ್ಲಿ ಮುಂದಿನ ಬಾಂಡ್ ಸಿನಿಮಾಗಳು ಯಾವ ರೀತಿ ಮೂಡಿಬರಲಿವೆ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
Discover more from Coastal Times Kannada
Subscribe to get the latest posts sent to your email.






Discussion about this post