ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿವೇಷ ತರಬೇತಿ ಪಡೆಯಲು ಮಂಗಳೂರಿಗೆ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ 14 ವರ್ಷದ ಅಪ್ರಾಪ್ತ ಬಾಲಕನೊಬ್ಬ ಪಣಂಬೂರು ಬಳಿಯ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಕೊಚ್ಚಿಹೋಗಿ ಕಾಣೆಯಾಗಿರುವ ದಾರುಣ ಘಟನೆ ನಡೆದಿದೆ. ಕಾಣೆಯಾದ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದಗುತ್ತು ನಿವಾಸಿ ಸೇಸಪ್ಪ ಎಂಬವರ ಪುತ್ರ ಶ್ರೇಯಸ್ ಎಸ್. ಕುಂಬಾರ (14) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಹುಲಿವೇಷ ಕುಣಿತದ ತರಬೇತಿ ಪಡೆಯಲು ಶ್ರೇಯಸ್ ತನ್ನ ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ಭಾನುವಾರ (ಅಕ್ಟೋಬರ್ 4) ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಂಗಳೂರಿಗೆ ಬಂದಿದ್ದನು.
ತರಬೇತಿ ಮುಗಿದ ಬಳಿಕ ಶ್ರೇಯಸ್ ಹಾಗೂ ಆತನ ಸ್ನೇಹಿತರು ನಗರದ ಸ್ಟೇಟ್ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದರು. ಸಂಜೆ ಸುಮಾರು 4:30 ರಿಂದ 5 ಗಂಟೆಯ ವೇಳೆಗೆ ಕೂಳೂರು – ಕೂರಿಕಟ್ಟ ಸಮುದ್ರ ತೀರಕ್ಕೆ ತೆರಳಿದ್ದಾರೆ. ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ, ಬೃಹತ್ ಅಲೆಗಳ ರಭಸಕ್ಕೆ ಶ್ರೇಯಸ್ ನೀರಿನಲ್ಲಿ ಮುಳುಗಿ ಕೊಚ್ಚಿಹೋಗಿದ್ದಾನೆ.
ದುರ್ಘಟನೆ ಸಂಭವಿಸಿದ ತಕ್ಷಣ ಜೊತೆಯಲ್ಲಿದ್ದ ಅಪ್ರಾಪ್ತ ಸ್ನೇಹಿತರು ತೀವ್ರ ಭಯಭೀತರಾಗಿ, ಅಂದು ರಾತ್ರಿ ಶ್ರೇಯಸ್‌ನ ಪೋಷಕರಿಗೆ ಯಾವುದೇ ಮಾಹಿತಿ ನೀಡದೇ ಮೌನವಾಗಿದ್ದರು. ಮರುದಿನ, ಅಂದರೆ ಸೋಮವಾರ (ಅಕ್ಟೋಬರ್ 5) ಬೆಳಗ್ಗೆ ಶ್ರೇಯಸ್‌ನ ಮನೆಗೆ ವಿಷಯ ಮುಟ್ಟಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಬಾಲಕನ ತಂದೆ ಸೇಷಪ್ಪ ಅವರು ತಕ್ಷಣವೇ ಪಣಂಬೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ.
ಪೋಷಕರ ದೂರಿನನ್ವಯ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2026, ‘ಮನುಷ್ಯ ಕಾಣೆ’ (Man Missing) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಮುದ್ರದಲ್ಲಿ ಮುಳುಗಿರುವ ಬಾಲಕನ ಪತ್ತೆಗಾಗಿ ಭಾರತೀಯ ಕರಾವಳಿ ಕಾವಲು ಪಡೆ , ಕರಾವಳಿ ಭದ್ರತಾ ಪಡೆ ಹಾಗೂ ಕರಾವಳಿ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಮಾಹಿತಿ ರವಾನಿಸಲಾಗಿದೆ. ಲೈಫ್‌ಗಾರ್ಡ್ ಸಿಬ್ಬಂದಿ, ಮುಳುಗು ತಜ್ಞರು ಹಾಗೂ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರ ನೆರವಿನೊಂದಿಗೆ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
Discover more from Coastal Times Kannada
Subscribe to get the latest posts sent to your email.








Discussion about this post