ಬೆಂಗಳೂರು, ಜುಲೈ 18: ಕುಡಿತದ ಮತ್ತಿನಲ್ಲಿ ಮಗನೇ ತನ್ನ ತಂದೆ, ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಬ್ಯಾಟರಾಯನಪುರದಲ್ಲಿ ಬೆಳಕಿಗೆ ಬಂದಿದೆ. ತಾಯಿ ಶಾಂತ (60) ಮತ್ತು ತಂದೆ ಭಾಸ್ಕರ್ (63) ಕೊಲೆಯಾದ ದುರ್ದೈವಿಗಳು. ಶರತ್ (26) ಎಂಬಾತ ಕೃತ್ಯ ಎಸಗಿದ್ದಾನೆ.
‘ಮಂಗಳೂರಿನ ಭಾಸ್ಕರ್–ಶಾಂತಾ, ಹಲವು ವರ್ಷಗಳಿಂದ ಬ್ಯಾಟರಾಯನಪುರದಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಎರಡನೇ ಮಗ ಶರತ್, ತಂದೆ–ತಾಯಿಯನ್ನು ಕೊಂದು ಪರಾರಿಯಾಗಿದ್ದಾನೆ. ಮೊದಲ ಮಗ ಸಜಿತ್, ಕೊಲೆ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮೃತ ಶಾಂತಾ, ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ. ಭಾಸ್ಕರ್, ಹೋಟೆಲೊಂದರಲ್ಲಿ ಕ್ಯಾಷಿಯರ್ ಕೆಲಸ ಮಾಡುತ್ತಿದ್ದರು. ಮೊದಲ ಮಗ ಸಚಿತ್, ಕಂಪನಿಯೊಂದರ ಉದ್ಯೋಗಿ. ಕೆಲಸವಿಲ್ಲದೇ ಮನೆಯಲ್ಲಿದ್ದ ಶರತ್, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆಗಾಗ ಮದ್ಯ ಕುಡಿದು ಗಲಾಟೆ ಮಾಡುತ್ತಿದ್ದ.’
‘ಸೋಮವಾರ ಸಂಜೆ ತಂದೆ–ತಾಯಿ ಜೊತೆ ಶರತ್ ಗಲಾಟೆ ಮಾಡಿದ್ದ. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ತಂದೆ–ತಾಯಿಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ ಶರತ್, ಮನೆಯ ಬಾಗಿಲು ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಮಂಗಳವಾರ ಬೆಳಿಗ್ಗೆ ತಂದೆ–ತಾಯಿಗೆ ಮೊದಲ ಮಗ ಇಂದು ಬೆಳಗ್ಗೆ ತಂದೆ-ತಾಯಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದ್ದರಿಂದ ಅನುಮಾನಗೊಂಡು ಪಕ್ಕದ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾನೆ. ಈ ವೇಳೆ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ತಿಳಿದು ಬಂದಿದೆ.
ಸ್ಥಳೀಯರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ದೌಡಾಯಿಸಿದ್ದು, ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಾಪತ್ತೆ ಆಗಿರುವ ಶರತ್‌ಗಾಗಿ ಹುಡುಕಾಟ ನಡೆಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post