ಮಂಗಳೂರು, ಜು 19 : ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್ನಲ್ಲಿ ಮಹಿಳೆಯ ಶವವೊಂದು ಪತ್ತೆಯಾದ ಘಟನೆ ನಡೆದಿದೆ. ಮೃತರನ್ನು ಪಡು ಪಣಂಬೂರು ಕಲ್ಲಾಪು ಬಳಿಯ ನಾಗಮ್ಮ ಶೆಟ್ಟಿಗಾರ್ (85) ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಕಳೆದ ನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದು, ಬುಧವಾರ ಸಂತೆಕಟ್ಟೆ ನಿವಾಸಿ ಪುಷ್ಪರಾಜ್ ಅಮೀನ್ ರವರ ಡ್ರೈನೇಜ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪುಷ್ಪರಾಜ್ ಅಮೀನ್ ಮುಂಬೈನಲ್ಲಿ ವಾಸವಾಗಿದ್ದು, ಪಡುಪಣಂಬೂರಿನಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಪುಷ್ಪರಾಜ್ ಅಮೀನ್ ರವರು ಊರಿಗೆ ಬಂದಿದ್ದು ಬುಧವಾರ ಬೆಳಗ್ಗೆ ಮನೆಯವರು ಮನೆಯ ಹಿಂದುಗಡೆ ಇರುವ ಸಣ್ಣ ಡ್ರೈನೇಜ್ ನೋಡುವಾಗ ಮಹಿಳೆ ನಾಗಮ್ಮ ಶೆಟ್ಟಿಗಾರ ಶವ ಮಡಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರು ಮುಲ್ಕಿ ಪೊಲೀಸರಿಗೆ ತಿಳಿಸಿದ್ದಾರೆ.
ಡ್ರೈನೇಜ್ ಮೇಲೆ ತಗಡಿನ ಶೀಟ್ ಇಟ್ಟಿದ್ದು ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದ್ದರೂ ಸಣ್ಣ ಡ್ರೈನೇಜ್ ಪಿಟ್ ಒಳಗಡೆ ಮಹಿಳೆ ಬಿದ್ದಿರುವ ಬಗ್ಗೆ ಹಾಗೂ ಶವ ಪತ್ತೆಯಾದ ಸ್ಥಿತಿ ನೋಡಿದರೆ ಅನುಮಾನ ಉಂಟಾಗಿದೆ.ಮಹಿಳೆ ಡ್ರೈನೇಜ್ ಫಿಟ್ ಒಳಗಡೆ ಬಿದ್ದು ಕೆಲದಿನಗಳಾಗಿದ್ದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post