ಬಜ್ಪೆ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಯುವತಿ ಸ್ಥಳದಲ್ಲಿಯೇ ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಗುರುಪುರ-ಬಂಗ್ಲೆಗುಡ್ಡೆ ಅಣೆಬಳಿಯ ಒಳ ರಸ್ತೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಎಂದು ಗುರುತಿಸಲಾಗಿದೆ. ಪ್ರೀತಿಯವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಶೋಭಾ ಅವರ ಪುತ್ರ ಭವಿಷ್ (9) ಹಾಗೂ ಆಟೋ ಚಾಲಕ ಪದ್ಮನಾಭ ಎಂಬವರು ಗಾಯಗೊಂಡಿದ್ದಾರೆ. ಮೀನಾಕ್ಷಿ ಅವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಯುವತಿಯ ಕುಟುಂಬಸ್ಥರು ಅರ್ಕುಳದಿಂದ ಆಟೋದಲ್ಲಿ ಪೊಳಲಿ ದೇವಸ್ಥಾನಕ್ಕೆ ಬಂದಿದ್ದು ಆನಂತರ ಅದ್ಯಪಾಡಿ ದೇವಸ್ಥಾನಕ್ಕೆ ಬಂದಿದ್ದರು. ಹಿಂತಿರುಗಿ ಹೋಗಲು ಗೂಗಲ್ ಮ್ಯಾಪಲ್ಲಿ ಗುರುಪುರ – ಬಂಗ್ಲೆಗುಡ್ಡೆ ರಸ್ತೆಯನ್ನು ಹತ್ತಿರ ಇದೆಯೆಂದು ತೋರಿಸಿತ್ತು. ಇದರಿಂದಾಗಿ ಆಟೋವನ್ನು ಕಿರಿದಾದ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದಿದ್ದರು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿದ ಆಟೋ ರಭಸದಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.ಪ್ರಕರಣ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.