ನವದೆಹಲಿ: ‘ಯೂರೋಪ್ ಮತ್ತು ವಿಶ್ವದ ಬೇರೆಡೆ ಕೊರೊನಾ ವೈರಾಣುವಿನ ಓಮೈಕ್ರಾನ್ ರೂಪಾಂತರ ತಳಿಯು ತೀವ್ರವಾಗಿ ಹರಡುತ್ತಿದೆ. ಹೀಗಾಗಿ ದೇಶದ ಜನರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಹೊಸ ವರ್ಷಾಚರಣೆ ಸಣ್ಣ ಪ್ರಮಾಣದಲ್ಲಿ ಇರಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.
ದೇಶದಲ್ಲಿ ಓಮೈಕ್ರಾನ್ ರೂಪಾಂತರ ತಳಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಶುಕ್ರವಾರ 101ಕ್ಕೆ ಏರಿಕೆಯಾಗಿದೆ. ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರವು ಹೇಳಿದೆ.
‘ಮಹಾರಾಷ್ಟ್ರದಲ್ಲಿ 32, ದೆಹಲಿಯಲ್ಲಿ 22, ರಾಜಸ್ಥಾನದಲ್ಲಿ 17, ತೆಲಂಗಾಣದಲ್ಲಿ 8, ಕರ್ನಾಟಕದಲ್ಲಿ 8, ಗುಜರಾತ್‌ನಲ್ಲಿ 5, ಕೇರಳದಲ್ಲಿ 5, ಆಂಧ್ರಪ್ರದೇಶ ಚಂಡೀಗಡ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರವು ಮಾಹಿತಿ ನೀಡಿದೆ.
‘ಮಹಾರಾಷ್ಟ್ರದಲ್ಲಿ ಶುಕ್ರವಾರ ಓಮೈಕ್ರಾನ್‌ನ 8 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ’ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7ಕ್ಕೆ ಏರಿದೆ ಎಂದು ಕೇರಳ ಸರ್ಕಾರ ಹೇಳಿದೆ. ಮಹಾರಾಷ್ಟ್ರ ಮತ್ತು ಕೇರಳ ಸರ್ಕಾರ ನೀಡಿರುವ ಸಂಖ್ಯೆಯನ್ನು ಪರಿಗಣಿಸಿದರೆ ದೇಶದಲ್ಲಿ ಪತ್ತೆಯಾದ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 119 ಆಗುತ್ತದೆ.
‘ಓಮೈಕ್ರಾನ್ ವ್ಯಾಪಕವಾಗಿರುವ ಮತ್ತು ಓಮೈಕ್ರಾನ್ ಇಲ್ಲದ ದೇಶಗಳಿಂದ ಚೆನ್ನೈಗೆ ಬಂದಿಳಿದಿರುವ 28 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಅಷ್ಟೂ ಜನರ ಮೂಗು ಮತ್ತು ಗಂಟಲ ದ್ರವದ ಮಾದರಿಯಲ್ಲಿ ಕೋವಿಡ್ ದೃಢಪಡಿಸುವ ಎಸ್ ವಂಶವಾಹಿಯ ಸಂಖ್ಯೆ ತೀರಾ ಕಡಿಮೆ ಇದೆ. ಅವರಿಗೆ ಓಮೈಕ್ರಾನ್ ತಗುಲಿರುವ ಅಪಾಯವಿದೆ. ಮಾದರಿಗಳನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳುಹಿಸಲಾಗಿದೆ’ ಎಂದು ತಮಿಳುನಾಡು ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.
ತುರ್ತು ಬಳಕೆ: ‘ಕೋವೊವ್ಯಾಕ್ಸ್’ಗೆ ಅನುಮತಿ :
ಭಾರತದಲ್ಲಿ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಕೋವಿಡ್ ಲಸಿಕೆ ‘ಕೋವೊವ್ಯಾಕ್ಸ್’ ಅನ್ನು ತುರ್ತು ಸಂದರ್ಭದಲ್ಲಿ ಬಳಸಲು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಅನುಮೋದನೆ ನೀಡಿದೆ. ಅಮೆರಿಕದ ಕಂಪನಿ ನೋವಾವ್ಯಾಕ್ಸ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.