ಮಂಗಳೂರು, ಡಿ.16 : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರತ್ಯೇಕ ತುಳು ವಿಭಾಗ ಆರಂಭಿಸುವಂತೆ ಎನ್ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುಹಾನ್ ಆಳ್ವ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಮನವಿ ನೀಡಿದ್ದಾರೆ.
ತುಳು ಭಾಷೆಯನ್ನು ಉನ್ನತ ಶಿಕ್ಷಣದಲ್ಲಿ ಅಳವಡಿಸಿ 2018-19ರ ಸಾಲಿನಲ್ಲಿ ಮಂಗಳೂರು ವಿವಿಯ ಹಂಪನಕಟ್ಟೆ ಸಂಧ್ಯಾ ಕಾಲೇಜಿನಲ್ಲಿ ಎಂಎ ತರಗತಿ ಆರಂಭಿಸಲಾಗಿತ್ತು. ಆದರೆ, ಎಂಎ ತರಗತಿ ಆರಂಭಗೊಂಡು ಐದು ವರ್ಷ ಕಳೆದರೂ ಕನ್ನಡ ಅಧ್ಯಯನ ವಿಭಾಗದಡಿ ನಡೆಸಲ್ಪಡುತ್ತಿದೆ. ಇದರಿಂದ ತುಳು ಭಾಷೆಯ ಬಗ್ಗೆ ಉನ್ನತ ಅಧ್ಯಯನ ಕೈಗೊಳ್ಳಲು ತೊಂದರೆಯಾಗಿದ್ದು, ಸ್ವತಂತ್ರ ವಿಭಾಗದ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ಮಂಗಳೂರು ವಿವಿಯ ಸಿಂಡಿಕೇಟ್ ನಲ್ಲಿ ನಿರ್ಣಯ ಆಗಿದ್ದು, ವಿವಿಯ ಕಡೆಯಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಬರೆಯಲಾಗಿದೆ. ವಿವಿಯ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಅನುಮತಿಸಿ, ಪ್ರತ್ಯೇಕ ಅಧ್ಯಯನ ವಿಭಾಗ ರಚಿಸಲು ಮುತುವರ್ಜಿ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತುಳು ಅಧ್ಯಯನ ವಿಭಾಗ ಆರಂಭಗೊಂಡಲ್ಲಿ ಪಿಎಚ್ ಡಿ ಅಧ್ಯಯನಕ್ಕೆ ಅವಕಾಶ ಸಿಗುತ್ತದೆ. ಅಲ್ಲದೆ, ತುಳು ಸಂಸ್ಕೃತಿ, ಭಾಷೆ, ಜನಪದ ಬಗ್ಗೆ ಅಧ್ಯಯನ ಕೈಗೊಳ್ಳಲು ಶೈಕ್ಷಣಿಕವಾಗಿ ಸ್ವತಂತ್ರ ಅಸ್ತಿತ್ವ ಸಿಗುತ್ತದೆ. ಪ್ರಸ್ತುತ ಕಳೆದ ಐದು ವರ್ಷಗಳಲ್ಲಿ ತುಳು ಭಾಷೆಯಲ್ಲಿ ಹಲವಾರು ಮಂದಿ ಎಂಎ ಪೂರೈಸಿದರೂ, ಆಸಕ್ತರಿಗೆ ಉನ್ನತ ಮಟ್ಟದ ಸಂಶೋಧನೆ ಕೈಗೊಳ್ಳಲು ಅವಕಾಶ ಇಲ್ಲ. ಸ್ವತಂತ್ರ ಅಸ್ತಿತ್ವ ಇಲ್ಲದ ಕಾರಣ, ಕನ್ನಡ ಅಧ್ಯಯನ ಕೇಂದ್ರದ ಅಡಿಯಲ್ಲಿ ತುಳು ವಿಭಾಗ ಇರುವುದರಿಂದ ಉನ್ನತ ಅಧ್ಯಯನಕ್ಕೆ ಅಡ್ಡಿಯಾಗಿದೆ. ಇದಲ್ಲದೆ, ಸದ್ಯಕ್ಕೆ ಕನ್ನಡ ವಿಭಾಗದವರೇ ತುಳು ಪಠ್ಯ ರಚನೆ, ಪ್ರಶ್ನೆಪತ್ರಿಕೆ ರಚನೆ, ಪರೀಕ್ಷಾ ಪತ್ರಿಕೆಗಳನ್ನು ಮೌಲ್ಯಮಾಪನ ನಡೆಸುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವ ಬಗ್ಗೆ ಗಮನಕ್ಕೆ ತಂದಿದ್ದಾರೆ.
ಇದಲ್ಲದೆ, 2019ರಲ್ಲೇ ಮಂಗಳೂರು ವಿವಿಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ತುಳುವನ್ನು ಭಾಷಾ ಪತ್ರಿಕೆಯಾಗಿ ಅಧ್ಯಯನಕ್ಕೆ ಅವಕಾಶ ನೀಡಿದ್ದರೂ, ಮೂಡುಬಿದ್ರೆಯ ಆಳ್ವಾಸ್ ಮತ್ತು ರಥಬೀದಿಯ ಸರಕಾರಿ ಕಾಲೇಜು ಹೊರತುಪಡಿಸಿ ಉಳಿದ ಕಡೆ ಆರಂಭಗೊಂಡಿಲ್ಲ. ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದ್ದು, ಇದಕ್ಕೆಲ್ಲ ಮಂಗಳೂರು ವಿವಿಯಲ್ಲಿ ಸ್ವತಂತ್ರ ತುಳು ಅಧ್ಯಯನ ಕೇಂದ್ರ ಆಗಬೇಕಾಗಿದೆ ಎಂದು ಸುಹಾನ್ ಆಳ್ವ ಮನವಿಯಲ್ಲಿ ಒತ್ತಾಯ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post