ಮಂಗಳೂರು: 12ರಿಂದ 14 ವರ್ಷ ದೊಳಗಿನ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆ ನೀಡುವ ಅಭಿಯಾನಕ್ಕೆ ಬುಧವಾರ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ವಿಭಾಗದಲ್ಲಿ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಚಾಲನೆ ನೀಡಿದರು.
ಜಿಲ್ಲೆಯಲ್ಲಿ 2ನೇ ಡೋಸ್ ಲಸಿಕೆಯನ್ನು ಶೇ. 92ರಷ್ಟು ಮಂದಿ ಪಡೆದುಕೊಂಡಿದ್ದು, ಶೇ. 8ರಷ್ಟು ಮಂದಿ ಬಾಕಿ ಇದ್ದಾರೆ. ಮೊದಲ ಡೋಸ್ ಲಸಿಕೆ ಪಡೆದವರು ಮತ್ತು ಎಲ್ಲ ಅರ್ಹರು ಲಸಿಕೆ ಹಾಕಿಸಿಕೊಳ್ಳ ಬೇಕು. 60 ವರ್ಷ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. 15ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಶೇ. 85ರಷ್ಟು ಪೂರ್ತಿಗೊಂಡಿದೆ. ಜಿಲ್ಲೆಯಲ್ಲಿ 12ರಿಂದ 14 ವರ್ಷದೊಳಗಿನ 73,365 ಮಂದಿ ಮಕ್ಕಳಿದ್ದು, ಅವರಿಗೆ ಹಂತ ಹಂತವಾಗಿ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಲಸಿಕೆ ಹಾಕುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಕೊರೊನಾ ಸೋಂಕು ತಗಲುವುದನ್ನು ತಡೆಯಬಹುದು. ಈಗಾಗಲೇ ಜಿಲ್ಲೆಯ ಬಹುಪಾಲು ಮಂದಿ ಲಸಿಕೆ ಪಡೆದಿರುವ ಕಾರಣ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದರು.
ಮೊದಲ ದಿನ ಗಣಪತಿ ಹೈಸ್ಕೂಲಿನ 20 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲಸಿಕೆ ಹಾಕಲಾಗಿದೆ. ಮುಂದಿನ 2 ದಿನ ಇದೇ ರೀತಿ ವಿವಿಧ ಶಾಲೆಗಳ 20 ಮಂದಿಗೆ ಲಸಿಕೆ ಹಾಕಲಾಗುವುದು. ಬಳಿಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಈ ಲಸಿಕಾ ಅಭಿಯಾನ ನಡೆಯಲಿದೆ ಎಂದು ಆರ್‌ಸಿಎಚ್ ಅಧಿಕಾರಿ ಡಾ| ರಾಜೇಶ್ ಮಾಹಿತಿ ನೀಡಿದರು.