ಮಂಗಳೂರು: ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡಿರುವವರು, ಸಾಫ್ಟ್ ಹಿಂದುತ್ವನೂ ಇಲ್ಲ, ಹಾರ್ಡ್ ಹಿಂದುತ್ವನೂ ಇಲ್ಲ, ನಾವು ಎಲ್ಲಾ ಧರ್ಮಗಳನ್ನು ಸಮನಾಗಿ ಕಾಣುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ವಿವಾದ ಕುರಿತು ಅಸಮಾಧಾನ ಇರುವವರು ಕರ್ನಾಟಕ ಬಂದ್ ಗೆ ಕರೆ ನೀಡಿ ಬಂದ್ ಮಾಡಿಕೊಂಡಿದ್ದಾರೆ. ನಾವು ಕೋರ್ಟ್ ತೀರ್ಪನ್ನು ಅನುಸರಿಸಬೇಕು,ಯಾವ ಧರ್ಮದವರಾದರೂ ಕೋಮುವಾದ ಮಾಡಬಾರದು, ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣಬೇಕು ಎಂದರು.
ಶಾಲೆಯಲ್ಲಿ ಭಗವದ್ಗೀತೆ ಕಲಿಸುವುದನ್ನು ಸ್ವಾಗತಿಸುತ್ತೇನೆ, ನೈತಿಕ ವಿದ್ಯೆ ಕಲಿಸುವುದಕ್ಕೆ ನಮ್ಮ ತಕರಾರು ವಿರೋಧವಿಲ್ಲ. ಆದರೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಹೇಳಿಕೊಡಲಿ ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಷ್ಟೆ, ಸಂವಿಧಾನಕ್ಕೆ ವಿರುದ್ಧವಾಗಿ ಮಾಡಬಾರದಷ್ಟೆ, ನಮ್ಮದು ಬಹು ಸಂಸ್ಕೃತಿ, ಬಹುತ್ವ ಇರುವ ರಾಷ್ಟ್ರ, ಸಹಿಷ್ಣುತೆ, ಸಹಬಾಳ್ವೆ ಮೇಲೆ ನಂಬಿಕೆ ಇಟ್ಟುಕೊಂಡಿರಬೇಕು ಎಂದರು.
ದಿ ಕಾಶ್ಮೀರ್ ಫೈಲ್ಸ್ ಕನ್ನಡಕ್ಕೆ ಡಬ್ ಮಾಡುವ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಸಿನಿಮಾನಾದ್ರೂ ತೋರಿಸಲಿ, ಸತ್ಯ ತೋರಿಸಲಿ. ಕಾಶ್ಮೀರದಲ್ಲಿ ಯಾರಿಗೆ ಸಮಸ್ಯೆ ಆಗಿತ್ತೆಂದು ಹೇಳಬೇಕು. ಕಾಶ್ಮೀರದಲ್ಲಿ ಉಗ್ರರ ಕೃತ್ಯ, ಕಾಶ್ಮೀರ ಪಂಡಿತರ ಸಮಸ್ಯೆ, ಬೇರೆ ಯಾರಿಗೆ ಸಮಸ್ಯೆ ಆಗಿತ್ತು ಎಂಬುದನ್ನು ಹೇಳಬೇಕು. ಆಗ ಅಲ್ಲಿ ಯಾರ ಸರ್ಕಾರವಿತ್ತು, ಸರ್ಕಾರ ಏನು ಮಾಡಿತು. ಗುಜರಾತ್ ಘಟನೆ, ಲಖೀಂಪುರ ಘಟನೆ ಎಲ್ಲವೂ ತೋರಿಸಲಿ. ನಾನು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದು ಕಡಿಮೆ. ಬಹಳ ಸಿನಿಮಾಗಳನ್ನು ನೋಡುವುದಿಲ್ಲ, ಹಾಗೆ ಇದನ್ನೂ ನೋಡುವುದಿಲ್ಲ ನಾನು ದಿ ಕಾಶ್ಮೀರ್ ಫೈಲ್ಸ್ ನೋಡುವುದಿಲ್ಲ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post