ಮಂಗಳೂರು: ಭಾರೀ ಸದ್ದು ಮಾಡುತ್ತಿರುವ “ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಉಚಿತವಾಗಿ ತೋರಿಸುವ ನೆಪದಲ್ಲಿ ಮೊಬೈಲ್‌ಗೆ ಲಿಂಕ್ ಕಳುಹಿಸಿ ವಂಚನೆ ನಡೆಯುವ ಬಗ್ಗೆ ಸೈಬರ್ ಭದ್ರತ ತಜ್ಞರು ಎಚ್ಚರಿಸಿದ್ದಾರೆ.
ವಂಚಕರು ಮೊಬೈಲ್‌ಗೆ ಲಿಂಕ್ ಒಂದನ್ನು ಕಳುಹಿಸುತ್ತಾರೆ. ಅದರ ಜತೆಗೆ “ದಿ ಕಾಶ್ಮೀರ್ ಫೈಲ್ಸ್’ ಸಿನೆಮಾವನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಸಂದೇಶ ಕೂಡ ಇರುತ್ತದೆ. ಈ ಲಿಂಕ್‌ನ್ನು ಕ್ಲಿಕ್ ಮಾಡಿದಾಗ ಮೊಬೈಲ್ ಫೋನ್‌ಗೆ ವೈರಸ್ ಕೂಡ ಡೌನ್‌ಲೋಡ್ ಆಗುತ್ತದೆ. ಇದೊಂದು ಮಾಲ್‌ವೇರ್. ಈ ಮಾಲ್‌ವೇರ್ (ವೈರಸ್) ಮೂಲಕ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಕದಿಯುತ್ತಾರೆ. ಅನಂತರ ಖಾತೆಯಿಂದ ಹಣವನ್ನು ದೋಚುತ್ತಾರೆ.
ಇಂತಹ ಘಟನೆಗಳು ಉತ್ತರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ ಎಂದು ಸೈಬರ್ ಭದ್ರತ ತಜ್ಞರು ತಿಳಿಸಿದ್ದಾರೆ.
ವಂಚಕರು ಎಲ್ಲರಿಗೂ ಒಂದೇ ರೀತಿಯ ಲಿಂಕ್ ಕಳುಹಿಸದೆ ವಿಭಿನ್ನ ಲಿಂಕ್ ಕಳುಹಿಸುತ್ತಾರೆ. ಈ ಲಿಂಕ್ ಗಳಲ್ಲಿ ಸಿನೆಮಾವೂ ಇರಬಹುದು. ಆದರೆ ಅದರ ಜತೆಗೆ ವೈರಸ್ ಕೂಡ ಇರುತ್ತದೆ. ಕೆಲವು ವಂಚಕರು ಉದ್ದೇಶಪೂರ್ವಕವಾಗಿಯೇ ಇಂತಹ ಪೈರೇಟೆಡ್ ಸಿನೆಮಾಗಳ ಲಿಂಕ್ ಕಳುಹಿಸುತ್ತಾರೆ ಎನ್ನುವುದು ಸೈಬರ್ ಭದ್ರತ ತಜ್ಞರ ಕಿವಿಮಾತು.
ಇಂತಹ ಲಿಂಕ್ ಬಂದ ಕೂಡಲೇ ಒತ್ತಬಾರದು. ಅದನ್ನು ತೀರಾ ಪರಿಚಿತರು ಕಳುಹಿಸಿದ್ದರೂ ಅದರ ಕುರಿತು ವಿಚಾರಿಸಬೇಕು. ಇಂತಹ ಲಿಂಕ್‌ಗಳ ಮೂಲಕ ಮೊಬೈಲ್‌ಗೆ “ಶಾರ್ಕ್‌ಬೋಟ್’ ರೀತಿಯ ಬ್ಯಾಂಕಿಂಗ್ ಟ್ರೋಜನ್ ವೈರಸ್‌ನ್ನು ಗೊತ್ತಿಲ್ಲದಂತೆಯೇ ಇನ್‌ಸ್ಟಾಲ್ ಮಾಡಿಸಲಾಗುತ್ತದೆ. ಈ ರೀತಿಯ ಲಿಂಕ್‌ಗಳನ್ನು ಒತ್ತದಿರುವುದೇ ಉತ್ತಮ.