ಮಂಗಳೂರು: ಸಿಎಂ ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ ರಾಜ್ಯಪಾಲರ ವಿರುದ್ಧ ಖಂಡನೆ ವ್ಯಕ್ತಪಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಂದು ಮಹಾನಗರ ಪಾಲಿಕೆ ಮುಂಭಾಗ ನಡೆದ ಪ್ರತಿಭಟನೆ ಹಿಂಸೆಯ ರೂಪ ಪಡೆಯಿತು. ಪ್ರತಿಭಟನೆಯ ವೇಳೆ ಉದ್ರಿಕ್ತ ಕಾರ್ಯಕರ್ತರು ಖಾಸಗಿ ಬಸ್ಗೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್ಸಿನ ಮುಂಭಾಗದ ಗಾಜಿಗೆ ಹಾನಿಯಾಗಿದೆ.
ಇದೇ ವೇಳೆ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಪಡಿಸಿಕೊಂಡರು. ತಕ್ಷಣ ಪೊಲೀಸರು ಟಯರ್ ಮೇಲೆ ನೀರು ಸಿಂಪಡಿಸಿ ಬೆಂಕಿಯನ್ನು ನಂದಿಸಿದರು. ಪ್ರತಿಭಟನೆಗೆ ಮೊದಲು ಮಂಗಳೂರಿನ ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನೂರಾರು ಪ್ರತಿಭಟನಾಕಾರರು ಲಾಲ್‌ಭಾಗ್‌ನ ಮನಪಾ ಕಚೇರಿ ಮುಂಭಾಗದವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಮನಪಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಂಎಲ್‌ಸಿ ಪ್ರಕಾಶ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿ, “ರಾಜ್ಯಪಾಲರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಸಿಎಂ ಅವರಿಗೆ ಕಳಂಕ ತರಿಸಲು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಸಿಎಂ ಮೇಲೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ರಾಜಕೀಯ ಪ್ರೇರಿತವಾಗಿ ರಾಜ್ಯದ ಜನತೆಗೆ, ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥರಗೊಳಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯಪಾಲರು, ಸಿಬಿಐ, ಇಡಿ, ಐಟಿಯನ್ನು ದುರುಪಯೋಗ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ. ಹೈಕಮಾಂಡ್ ಸೇರಿದಂತೆ ನಾವೆಲ್ಲರೂ ಸಿದ್ದರಾಮಯ್ಯ ಅವರೊಂದಿಗೆ ಇದ್ದೇವೆ. ರಾಷ್ಟ್ರಪತಿಗಳು ತಕ್ಷಣ ರಾಜ್ಯಪಾಲರನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಪ್ರಾಸಿಕ್ಯೂಷನ್ ಆರ್ಡರ್ ಅನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ರಾಷ್ಟ್ರಪತಿಗಳ ಬಳಿಗೆ ಹೋಗುವ ಅನಿವಾರ್ಯತೆಯಿದೆ ಎಂದು ಒತ್ತಾಯಿಸುತ್ತೇವೆ” ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ, ಎಂ ಎಲ್ ಸಿ ಪ್ರಕಾಶ್ ರಾಥೋಡ್, ಮುಖಂಡರಾದ ರಮಾನಾಥ ರೈ, ಹರೀಶ್ ಕುಮಾರ್, ಐವನ್ ಡಿಸೋಜಾ, ಪದ್ಮರಾಜ್, ಶಕುಂತಳಾ ಶೆಟ್ಟಿ, ಅಶೋಕ್ ರೈ, ಇಬ್ರಾಹಿಮ್ ಕೋಡಿಜಾಲ್, ಮಿಥುನ್ ರೈ , ಪ್ರವೀಣ್ ಚಂದ್ರ ಆಳ್ವ, ಜಿ. ಎ. ಬಾವ, ಶಾಲೆಟ್ಫ ಪಿಂಟೋ, ಪ್ರತಿಭಾ ಕುಳಾಯಿ, ಎಂ.ಎಸ್. ಮುಹಮ್ಮದ್, ವಿಶ್ವಾಸ್ ಕುಮಾರ್ ದಾಸ್, ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post