ಬೆಂಗಳೂರು ಸೆ.18 : ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಒಂದೇ ಕುಟುಂಬದ ಐದು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದಿಂದ ಮನೆಯಲ್ಲಿರುವ ಐದು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಐವರು ನೇಣು ಬಿಗಿದ ಸ್ಥಿತಿಯಲ್ಲಿದ್ದು, ಐದು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ಮೂರು ವರ್ಷದ ಮಗು ಬದುಕುಳಿದಿದ್ದು, ಮೃತ ಶರೀರಗಳ ಮುಂದೆ ಹಸಿವಿನಿಂದ ಕುಳಿತಿತ್ತು ಎನ್ನಲಾಗಿದೆ.
ಮೃತರನ್ನು ಭಾರತಿ (50), ಸಿಂಚನ (33), ಸಿಂಧೂರಾಣಿ (30), ಮಧುಸಾಗರ್ (26) ಮತ್ತು ಒಂಭತ್ತು ತಿಂಗಳ ಮಗು ಎಂದು ಗುರುತಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮನೆಯ ಹಾಲ್ನಲ್ಲಿ ತಾಯಿ ಭಾರತಿ, ರೂಮಿನಲ್ಲಿ ಮಗಳು ಸಿಂಧೂರಾಣಿ ನೇಣು ಹಾಕಿಕೊಂಡಿದ್ದಾರೆ. ಘಟನೆ ನಡೆದಾಗ ಗಂಡ ಶಂಕರ್ ಮನೆಯಲ್ಲಿ ಇರಲಿಲ್ಲ. ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಎಂದು ಹೇಳಲಾಗಿದೆ. ನಿನ್ನೆ ಮನೆಗೆ ಬಂದು ನೋಡಿದಾಗ ಲಾಕ್ ಆಗಿತ್ತು, ನಂತರ ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದು ವಾಪಸ್ ಹೋಗಿದ್ದೆ. ಮತ್ತೆ ಇಂದು ಬಂದು ನೋಡಿದಾಗಲೂ ಯಾರೂ ಪ್ರತಿಕ್ರಿಯೆ ಕೊಡಲಿಲ್ಲ, ಇದರಿಂದ ಭಯಕ್ಕೀಡಾಗಿ ಬಾಗಿಲು ಒಡೆದಾಗ ಎಲ್ಲರೂ ಸಾವನ್ನಪ್ಪಿದ್ದರು ಎಂದು ಗಂಡ ಶಂಕರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎಲ್ಲಾ ಶರೀರವೂ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಸುಮಾರು ಐದು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಶಂಕರ್ ಕೂಡಾ ಮನೆ ಬಿಟ್ಟು ಹೋಗಿ ಐದು ದಿನಗಳಾಗಿದೆ. ಮನೆಯ ಯಜಮಾನನ ಹೆಸರು ಹಲ್ಲಗೇರಿ ಶಂಕರ್ ಎಂದು. ಈತನ ಬಗ್ಗೆ ಹೆಚ್ಚಿನ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ, ತನಿಖೆಯ ಉಸ್ತುವಾರಿ ವಹಿಸಿದ್ದಾರೆ.
ಮಗಳು ಸಿಂಧೂರಾಣಿಗೆ ಮದುವೆಯಾಗಿದ್ದರೂ, ಗಂಡನ ಜೊತೆ ಗಲಾಟೆ ಮಾಡಿಕೊಂಡು ಮನೆಬಿಟ್ಟು ಬಂದಿದ್ದಳು ಎನ್ನಲಾಗಿದೆ. ಶಂಕರ್ ಹಲವು ಬಾರಿ ಅಳಿಯನ ಮನೆಗೆ ಹೋಗುವಂತೆ ಹೇಳಿದರೂ, ಆಕೆ ಹೋಗದ ಹಿನ್ನೆಲೆ ಐದು ದಿನಗಳ ಹಿಂದೆ ಜಗಳವಾಗಿದೆ. ಜಗಳ ಮಾಡಿಕೊಂಡು ಶಂಕರ್ ಮನೆಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ಅಳಿಯನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅದೃಷ್ಟವಶಾತ್ ಬದುಕುಳಿದ ಮೂರು ವರ್ಷದ ಮಗು, ಹಸಿವಿನಿಂದ ಬಳಲಿದೆ. ಆಸ್ಪತ್ರೆಗೆ ಮಗುವನ್ನು ಕರೆದೊಯ್ದು ತಪಾಸಣೆ ಮಾಡಲಾಗಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post