ಮಂಗಳೂರು, ನ 18: ನಗರದ ಸೆಂಟ್ರಲ್ ರೈಲು ನಿಲ್ದಾಣದ ರೈಲ್ವೆ ಫ್ಲ್ಯಾಟ್ ಫಾರಂಗಳಿಗೆ ತೊಂದರೆಯಾಗಿದ್ದ ಎರಡು ಬೃಹತ್ ಅಶ್ವತ್ಥ ವೃಕ್ಷಗಳನ್ನು ನಿರಂತರ 18 ಗಂಟೆಗಳ ಅವಿರತ ಶ್ರಮದಿಂದ ವೃಕ್ಷಪ್ರೇಮಿ ಜೀತ್ ಮಿಲನ್ ರೋಚ್ ಸ್ಥಳಾಂತರ ಮಾಡಿಸಿದ್ದಾರೆ. ಈ ಮೂಲಕ ಅಭಿವೃದ್ಧಿ ಹೆಸರಿನಲ್ಲಿ ಬಲಿಯಾಗಬೇಕಿದ್ದ ಎರಡು ಅಶ್ವಥ ಮರಗಳನ್ನು ಉಳಿಸಿದ್ದಾರೆ.ಗುರುವಾರ ಬೆಳಗ್ಗೆ 7ಗಂಟೆಗೆ ಆರಂಭಿಸಿ ತಡರಾತ್ರಿ 1 ಗಂಟೆಗೆ ವೃಕ್ಷಗಳ ಸ್ಥಳಾಂತರ ಕಾರ್ಯವನ್ನು ಸಂಪೂರ್ಣಗೊಳಿಸಲಾಗಿದೆ. ಬರೋಬ್ಬರಿ 100 ಟನ್ ಗಳಿಗಿಂತಲೂ ಅಧಿಕ ಭಾರವಿರುವ ಈ ವೃಕ್ಷಗಳನ್ನು ಜಿಸಿಬಿ, ಕ್ರೈನ್‌ಗಳನ್ನು ಬಳಸಿ ಚಾಕಚಕ್ಯತೆಯಿಂದ ಭಾರಿ ಸಾಹಸ ಮೆರೆದು ಜೀತ್ ಮಿಲನ್ ಹಾಗೂ ತಂಡ ಸ್ಥಳಾಂತರ ಮಾಡಿದೆ. 60-65 ವರ್ಷಗಳ ಹಿಂದಿನ ಈ ವೃಕ್ಷಗಳು ಆರು ತಿಂಗಳ ಕಾಲದ ನಿರಂತರ ಪೋಷಣೆಯಲ್ಲಿ ಮತ್ತೆ ಚಿಗುರಲಿದೆ ಎಂದು ಮಿಲನ್ ತಿಳಿಸಿದ್ದಾರೆ.
ರೈಲ್ವೆ ಫ್ಲ್ಯಾಟ್ ಫಾರಂ ಬಳಿಯೇ ಈ ಅಶ್ವತ್ಥ ವೃಕ್ಷಗಳಿದ್ದು, ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸ್ಥಳಾಂತರ ಮಾಡಬೇಕಿತ್ತು. ಅದೇ ರೀತಿ ಹೈಟೆನ್ಷನ್ ತಂತಿಯೂ ಅಲ್ಲಿಂದ ಹಾದುಹೋಗಿದ್ದು, ಈ ತೊಂದರೆಯನ್ನು ನಿವಾರಿಸಿ ಈ ಮರಗಳ ಸ್ಥಳಾಂತರ ಕಾರ್ಯ ನನಗೆ ಸವಾಲಾಗಿತ್ತು. ಆದರೆ ನಿರಂತರ 18 ಗಂಟೆಗಳ ಶ್ರಮದಿಂದ ಮರಗಳನ್ನು ಯಾವುದೇ ತೊಂದರೆಯಿಲ್ಲದೆ ರೈಲು ನಿಲ್ದಾಣದ ಬಳಿಯೇ ಈ ವೃಕ್ಷಗಳನ್ನು ರೈಲ್ವೇ ಅಧಿಕಾರಿಗಳ ಮುತುವರ್ಜಿಯಿಂದ ಸ್ಥಳಾಂತರ ಮಾಡಲಾಗಿದೆ ಎಂದು ಜೀತ್ ಮಿಲನ್ ರೋಚ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಮೂರು ವರ್ಷಗಳ ಹಿಂದೆ ಜೀತ್ ಮಿಲನ್ ಇದೇ ರೈಲು ನಿಲ್ದಾಣದ ಬಳಿ ಬೃಹತ್ ಮರವೊಂದನ್ನು ಸ್ಥಳಾಂತರ ಮಾಡಿಸಿದ್ದರು. ಇದೀಗ ಆ ಬೃಹತ್ ವೃಕ್ಷ ಚಿಗುರಿ ಮತ್ತೆ ಬೆಳೆಯಲಾರಂಭಿಸಿದೆ. ವೃತ್ತಿಯಲ್ಲಿ ಜೀತ್ ಮಿಲನ್ ರೋಚ್ ಶ್ರೀಮಂತರ ಕಾಕ್‌ಟೈಲ್ ಪಾರ್ಟಿ ಆಯೋಜಿಸುವ ಕೆಲಸ ಮಾಡುತ್ತಾರೆ. ಸಂಪಾದನೆ ಮಾಡಿದ ಹಣದಲ್ಲಿ ಅರ್ಧ ಪರಿಸರ ಸಂರಕ್ಷಣೆಗೆ ಹೋಗುತ್ತದೆ. ಆದ್ದರಿಂದ, ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ. ಸಸ್ಯಸಂಕುಲ ಬೆಳೆಸುವ ಈ ಕಾರ್ಯಕ್ಕೆ ಜೀತ್ ಮಿಲನ್ ಪುತ್ರ ಶಾನ್ ಎಥನ್ ರಾಜ್ ಕೈ ಜೋಡಿಸಿದ್ದಾರೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಕೈಯಲ್ಲಿ ಗುದ್ದಲಿ ಹಿಡಿದು ಹೊರಡುವ ಅಪ್ಪ, ಮಗ ಗಿಡ ನೆಡುವ ಕಾಯಕದಲ್ಲಿ ಕಾಲ ಕಳೆಯುತ್ತಾರೆ.
ವಿಶೇಷವೆಂದರೆ ಮಿಲನ್ ರೋಚ್ ಸ್ಮಶಾನದಲ್ಲಿಯೇ ಸಾವಿರಾರು ಗಿಡಗಳನ್ನು ಬೆಳೆಸುತ್ತಿದ್ದಾರೆ. ಮಂಗಳೂರಿನ ನಂದಿಗುಡ್ಡೆ ಸ್ಮಶಾನದ ಹಿಂಬದಿಯ ಎಕರೆಗಟ್ಟಲೆ ಜಾಗದಲ್ಲಿ ಕದಂಬ, ಸಂಪಿಗೆ, ಮಾವು, ಹಲಸು, ಬೇವು ಸೇರಿದಂತೆ ಸುಮಾರು 2,400 ಗಿಡಗಳನ್ನು ಬೆಳೆಸಿದ್ದಾರೆ. ಮಂಗಳೂರಿನಾದ್ಯಾಂತ ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿರುವ ಜೀತ್ ಮಿಲನ್ ರೋಚ್ ತಾವು ನೆಟ್ಟಿರುವ ಗಿಡಗಳ ಲೆಕ್ಕವಿಟ್ಟಿಲ್ಲ. ಮಂಗಳೂರು ನಗರದ ತ್ಯಾಜ್ಯ ತುಂಬಿದ ಪ್ರದೇಶಗಳನ್ನು ಸ್ವಚ್ಛ ಮಾಡಿ ಅಲ್ಲೊಂದು ಸುಂದರ ಕಾಡು ನಿರ್ಮಿಸಿದ ಕೀರ್ತಿ ಜೀತ್ ಮಿಲನ್ ರೋಚ್ ಅವರಿಗೆ ಸಲ್ಲುತ್ತದೆ.